ಕುಶಾಲನಗರ, ಡಿ. 17: ಕುಶಾಲನಗರ ಪ.ಪಂ. ವ್ಯಾಪ್ತಿಯ ಬಲಮುರಿ ದೇವಾಲಯ ಸಮೀಪ ಸಾರ್ವಜನಿಕ ಉಪಯೋಗಕ್ಕೆ ಮೀಸಲಿರಿಸಿದ ಜಾಗಕ್ಕೆ ವ್ಯಕ್ತಿಯೊಬ್ಬರು ಅಕ್ರಮವಾಗಿ ಅಳವಡಿಸಿದ್ದ ಬೇಲಿಯನ್ನು ಪಪಂ ತೆರವುಗೊಳಿಸಿದೆ. ಪಂಚಾಯ್ತಿ ಮೂಲಕ ಉದ್ಯಾನವನ ಮತ್ತಿತರ ಉಪಯೋಗಕ್ಕೆ ಮೀಸಲಿರಿಸಿದ್ದ ಜಾಗವನ್ನು ಅಲ್ಲಿನ ನಿವಾಸಿ ದೊಡ್ಡಯ್ಯ ಎಂಬವರು ಒತ್ತುವರಿ ಮಾಡಿದ್ದಾರೆ ಎಂದು ನಾಗರಿಕರು ಆರೋಪಿಸಿದ ಹಿನ್ನೆಲೆಯಲ್ಲಿ ಪ.ಪಂ. ಮುಖ್ಯಾಧಿಕಾರಿ ಸುಜಯ್‍ಕುಮಾರ್ ಮತ್ತು ಪಂಚಾಯಿತಿ ಸದಸ್ಯರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಸರಕಾರಿ ಜಾಗದ ಒತ್ತುವರಿ ಮಾಡಿರುವದು ಅಕ್ರಮವಾಗಿರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಿ ಪಂಚಾಯ್ತಿ ವಶಕ್ಕೆ ಪಡೆಯಲಾಗಿದೆ ಎಂದು ಮುಖ್ಯಾಧಿಕಾರಿ ಸುಜಯ್‍ಕುಮಾರ್ ತಿಳಿಸಿದ್ದಾರೆ.