ಸೋಮವಾರಪೇಟೆ, ಡಿ. 17: ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಮನಿಶ್ ಮಣಿಕಂಠ ಎಂಬಾತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಾಲೂಕು ವೀರಶೈವ ಸಮಾಜ ಆಗ್ರಹಿಸಿದೆ.
ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಕಾರ್ಯದರ್ಶಿ ಜೆ.ಸಿ. ಶೇಖರ್, ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಮಾನಕರ ರೀತಿಯಲ್ಲಿ ಪೋಸ್ಟ್ ಹಾಕುವ ಮೂಲಕ ಭಕ್ತರ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಈತನ ವಿರುದ್ಧ ಪೊಲೀಸ್ ದೂರು ನೀಡಿದ್ದರೂ ಇದುವರೆಗೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸಿದ್ಧಗಂಗಾ ಶ್ರೀಗಳು ಹಲವಷ್ಟು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಎಲ್ಲಾ ಧರ್ಮಗಳ ವಿದ್ಯಾರ್ಥಿಗಳಿಗೂ ಅನ್ನ, ಅಕ್ಷರ ದಾಸೋಹ ನೀಡುತ್ತಾ ಬಂದಿದ್ದಾರೆ. ಸಮಾಜವೇ ಅವರನ್ನು ನಡೆದಾಡುವ ದೇವರೆಂದು ಪೂಜ್ಯ ಭಾವನೆಯಿಂದ ಕಾಣುತ್ತಿದೆ. ಆದರೆ ಶ್ರೀಗಳ ವಿರುದ್ಧ, ಕೆಎಸ್‍ಆರ್‍ಟಿಸಿ ಚಾಲಕನಾಗಿರುವ ವ್ಯಕಿಯೋರ್ವ ಫೇಸ್‍ಬುಕ್‍ನಲ್ಲಿ ನಿಂದನಾತ್ಮಕ ಬರಹ ಪ್ರಕಟಿಸಿರುವದು ಖಂಡನೀಯ. ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ವೀರಶೈವ ಸಮಾಜದ ಯಜಮಾನ ಕೆ.ಎನ್. ಶಿವಕುಮಾರ್, ಶೆಟ್ರು ಕೆ.ಎನ್. ತೇಜಸ್ವಿ, ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಉಪಸ್ಥಿತರಿದ್ದರು.