ಗೋಣಿಕೊಪ್ಪ ವರದಿ, ಡಿ. 17 : ವಾಹನದಟ್ಟಣೆ ನಿಯಂತ್ರಣಕ್ಕಾಗಿ ಗೋಣಿಕೊಪ್ಪ ಪಟ್ಟಣದಲ್ಲಿ ಏಕಮುಖ ಸಂಚಾರಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವದು ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಡಿ. ಪನ್ನೇಕರ್ ಹೇಳಿದರು.ಪರಿಮಳ ಮಂಗಳ ವಿಹಾರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ವಾಹನ ಸುರಕ್ಷತೆ ಹಾಗೂ ಸಂಚಾರ ಪಾಲನೆ ಎಂಬ ವಿಷಯದಲ್ಲಿ ನಡೆದ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ ಹಾಗೂ ಸಾರ್ವಜನಿಕರು ಪಟ್ಟಣದಲ್ಲಿನ ವಾಹನ ದಟ್ಟಣೆ ನಿಯಂತ್ರಣಕ್ಕೆ ಬೈಪಾಸ್ ಮೂಲಕ ಏಕಮುಖ ಸಂಚಾರದ ಕ್ರಮಕ್ಕೆ ಒತ್ತಾಯಿಸಿದ ಸಂದರ್ಭ ಅವರು ಪ್ರತಿಕ್ರಿಯಿಸಿದರು. ಪೊಲೀಸ್ ಇಲಾಖೆ ಪ್ರಾಯೋಗಿಕವಾಗಿ ಏಕಮುಖ ಸಂಚಾರ ನಡೆಸಲು ಕ್ರಮಕೈಗೊಳ್ಳಲಿದೆ. ಸಾರ್ವಜನಿಕರ ಸಹಕಾರದಲ್ಲಿ ನಡೆಯಬೇಕಿದೆ ಎಂದರು. ಸಾಕಷ್ಟು ಸವಾರರು ಪೊಲೀಸರನ್ನು ಕಾಣುವಾಗ ಮಾತ್ರ ಹೆಲ್ಮೆಟ್ ಧರಿಸುವದು, ವಾಹನ ವೇಗ ನಿಯಂತ್ರಣ, ಸೀಟ್‍ಬೆಲ್ಟ್ ಇಂತಹ ಸುರಕ್ಷಿತ ಮಾರ್ಗಗಳನ್ನು ಅನುಸರಿಸುತ್ತಾರೆ. ಪೊಲೀಸ್ ಸಿಬ್ಬಂದಿ ಎಲ್ಲಾ (ಮೊದಲ ಪುಟದಿಂದ) ಕಡೆಗಳಲ್ಲೂ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಸವಾರರೇ ಅವರ ಸುರಕ್ಷೆಯ ದೃಷ್ಟಿಯಿಂದ ಸಂಚಾರ ನಿಯಮ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಲ್ಲಿ ನಿಯಮ ಪಾಲಿಸಲು ಕಾಲೇಜು ಕ್ಯಾಂಪಸ್‍ಗಳಿಗೆ ನಾವೇ ಡ್ರೈವ್ ಮಾಡುವ ಮೂಲಕ ಸಂಚಾರ ನಿಯಮ ಪಾಲಿಸದವರ ವಿರುದ್ಧ ಕ್ರಮಕ್ಕೆ ಮುಂದಾಗುವದಾಗಿ ಅವರು ಎಚ್ಚರಿಸಿದರು.
ಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣ ಸಮೀಪ ವೀರಾಜಪೇಟೆಗೆ ತೆರಳುವ ಬಸ್‍ಗಳಿಗೆ ರಸ್ತೆ ಬದಿಯಲ್ಲಿ ನಿಲ್ಲಿಸಲು ಹೆಚ್ಚಿನ ಸಮಯವಕಾಶ ನೀಡಬೇಕು ಎಂದು ಸ್ಥಳೀಯ ಖಾಸಗಿ ಬಸ್ ನೌಕರರು ಒತ್ತಾಯಿಸಿದರು.
ಖಾಸಗಿ ಬಸ್ ಕೇವಲ 2 ನಿಮಿಷ ನಿಲ್ಲಿಸಲು ಅವಕಾಶ ನೀಡಲಾಗಿದೆ. ಇಲ್ಲಿ ಮೈಸೂರು ಕಡೆಗಳಿಂದ ಬರುವ ಸರ್ಕಾರಿ ಬಸ್‍ಗಳು ಹೆಚ್ಚಾಗಿ ನಿಲ್ಲುವದರಿಂದ ಖಾಸಗಿ ಬಸ್‍ಗೆ ಪ್ರಯಾಣಿಕರಿಲ್ಲದೆ ನಷ್ಟ ಉಂಟಾಗಿದೆ. 5 ಕ್ಕೂ ಹೆಚ್ಚು ಬಸ್‍ಗಳು ಓಡಾಟ ನಿಲ್ಲಿಸಿವೆ. ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ನೌಕರರ ಕುಟುಂಬ ತೊಂದರೆ ಪಡುವಂತಾಗಿದೆ ಎಂದು ನೌಕರ ವಿನೋದ್ ಹೇಳಿದರು. ಸರ್ಕಾರಿ ಬಸ್ ನಿಲುಗಡೆಗೂ ಅಲ್ಲಿ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ವಾಹನ ದಟ್ಟಣೆ ನಿರ್ವಹಣೆಗಾಗಿ ಹೀಗೆ ಮಾಡಲಾಗುತ್ತಿದೆ. ಸರ್ಕಾರಿ ಬಸ್‍ಗಳ ಮೇಲೂ ಕ್ರಮಕೈಗೊಂಡಿದ್ದೇವೆ. ಹೆಚ್ಚಿನ ಸಮಯ ನೀಡಲಾಗುವದಿಲ್ಲ ಎಂದು ಉಪನಿರೀಕ್ಷಕ ಶ್ರೀಧರ್ ಹೇಳಿದರು.
ಗೋಣಿಕೊಪ್ಪ ಪಟ್ಟಣದಲ್ಲಿ ವಾಹನ ನಿಲುಗಡೆಗೆ ಕ್ರಮಕೈಗೊಳ್ಳಲಾಗುವದು ಎಂದು ಅಧಿಕಾರಿ ತಿಳಿಸಿದರು. ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ತೆರಳುವಾಗ ರಸ್ತೆಯ ಅಗಲಕ್ಕೂ ನಡೆದಾಡುವದಿಂದ ಅಪಘಾತ ಹೆಚ್ಚಾಗಲಿದೆ. ರಸ್ತೆಯ ಒಂದು ಬದಿಯಲ್ಲಿ ಸಾಗುವಂತೆ ಸಾರ್ವಜನಿಕರು ಒತ್ತಾಯಿಸಿದರು.
ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ನಿಲುಗಡೆಗೆ ಇಲಾಖೆ ಕ್ರಮಕೈಗೊಳ್ಳಬೇಕು. ಇದರಿಂದ ವಾಹನ ದಟ್ಟಣೆ ತಪ್ಪಲಿದೆ ಎಂದು ಗ್ರಾಮಸ್ಥ ಎರ್ಮುಹಾಜಿ ಒತ್ತಾಯಿಸಿದರು. ಕೆಟ್ಟು ನಿಂತಿರುವ ಟ್ರಾಫಿಕ್ ಲೈಟ್‍ಗಳನ್ನು ದುರಸ್ತಿಪಡಿಸುವಂತೆ ದಯಾ ಚಂಗಪ್ಪ ಒತ್ತಾಯಿಸಿದರು. ಗೋಣಿಕೊಪ್ಪ ಪಟ್ಟಣದಲ್ಲಿನ ಸಿಸಿ ಕ್ಯಾಮೆರ ದುರಸ್ತಿ ಪಡಿಸುವಂತೆ ಪೊನ್ನಿಮಾಡ ಸುರೇಶ್ ಒತ್ತಾಯಿಸಿದರು.
ಅಪಘಾತ ಸಂದರ್ಭ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಹೆಚ್ಚು ಮುತುವರ್ಜಿವಹಿಸಿ ಜೀವರಕ್ಷಕ ಪ್ರಶಸ್ತಿ ಪಡೆದ ಸ್ಥಳೀಯ ಸಮಾಜ ಸೇವಕ ಶರತ್‍ಕಾಂತ್ ಅವರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.
ಅಪಘಾತ ನಿಯಂತ್ರಣಕ್ಕೆ ಸಾರ್ವಜನಿಕರು, ಯುವ ಸಮೂಹ ತೆಗೆದುಕೊಳ್ಳಬಹುದಾದ ಮುಂಜಾಗ್ರತ ಕ್ರಮ, ಸಂಚಾರ ನಿಯಮ ಪಾಲನೆ ಬಗ್ಗೆ ಸ್ಲೈಡ್‍ಶೋ ಮೂಲಕ ಮಾಹಿತಿ ನೀಡಲಾಯಿತು. ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ವಾಹನ ಚಾಲಕರು, ಆಟೋ, ಬಾಡಿಗೆ ವಾಹನ, ಶಾಲಾ ವಾಹನ ಚಾಲಕರು ಪಾಲ್ಗೊಂಡಿದ್ದರು.
ಈ ಸಂದರ್ಭ ಡಿವೈಎಸ್‍ಪಿ ನಾಗಪ್ಪ, ತಹಶೀಲ್ದಾರ್ ಗೋವಿಂದರಾಜು, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್, ವೃತ್ತ ನಿರೀಕ್ಷಕರುಗಳಾದ ದಿವಾಕರ್, ಪಿ.ಕೆ. ರಾಜು, ಉಪನಿರೀಕ್ಷಕರುಗಳಾದ ಶ್ರೀಧರ್, ಮಹೇಶ್ ಉಪಸ್ಥಿತರಿದ್ದರು. - ಸುದ್ದಿಪುತ್ರ