ಸೋಮವಾರಪೇಟೆ, ಡಿ. 17: ವಿವಿಧ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಪಡೆದಿರುವ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಸರ್ಕಾರ ಮಧ್ಯೆ ಪ್ರವೇಶಿಸಿ ಬಡ್ಡಿ ರಹಿತವಾಗಿ ಸಾಲ ಮರುಪಾವತಿ ಮಾಡಲು ಕಾಲಾವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ನೂರಾರು ಕಾರ್ಮಿಕರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪುಷ್ಪಗಿರಿ ಕೂಲಿ ಕಾರ್ಮಿಕರು ಹಾಗೂ ಕೃಷಿಕರ ವೇದಿಕೆ ನೇತೃತ್ವದಲ್ಲಿ ಇಲ್ಲಿನ ವಿವೇಕಾನಂದ ವೃತ್ತದಿಂದ ಪಟ್ಟಣದ ಮುಖ್ಯರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸದಸ್ಯರುಗಳು, ಸಾಲವನ್ನು ಮರುಪಾವತಿ ಮಾಡಲು ಕಾಲಾವಕಾಶ ಕಲ್ಪಿಸಬೇಕೆಂದು ಘೋಷಣೆ ಕೂಗಿದರು.

ಇಲ್ಲಿನ ತಾಲೂಕು ಕಚೇರಿ ಎದುರು ಧರಣಿ ಕುಳಿತ ನೂರಾರು ಕಾರ್ಮಿಕರು, ಸರ್ಕಾರ ನಮಗಳ ನೆರವಿಗೆ ಧಾವಿಸಬೇಕು. ರೈತರಿಗೆ ಸಾಲ ಮನ್ನಾ ಮಾಡಿದ ರೀತಿ ನಮಗೂ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಾಕೃತಿಕ ವಿಕೋಪದಿಂದ ರೈತರಷ್ಟೇ ಕೂಲಿ ಕಾರ್ಮಿಕರೂ ಸಹ ಸಂಕಷ್ಟಕ್ಕೆ ಸಿಲುಕಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುವದೇ ದುಸ್ತರವಾಗಿದೆ. ಪ್ರಾಕೃತಿಕ ವಿಕೋಪದಿಂದ ತೋಟ ಸೇರಿದಂತೆ ಇತರೆಡೆ ಕೂಲಿ ಕೆಲಸವೂ ಸಿಗುತ್ತಿಲ್ಲ. ಆದರೆ ಖಾಸಗಿ ಹಣಕಾಸು ಸಂಸ್ಥೆಯವರು ಸಾಲದ ಕಂತನ್ನು ಕಟ್ಟಲೇಬೇಕೆಂದು ಒತ್ತಾಯ ಹಾಕುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಕಳೆದ 12 ವರ್ಷಗಳಿಂದಲೂ ಸಂಘಗಳನ್ನು ಕಟ್ಟಿಕೊಂಡು ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲ ಪಡೆದು, ನಿಯಮಿತವಾಗಿ ಮರುಪಾವತಿ ಮಾಡುತ್ತಲೇ ಬಂದಿದ್ದೇವೆ. ಆದರೆ ಇದೀಗ ಪರಿಸ್ಥಿತಿ ಕೈಮೀರಿದ್ದು, ಹಣ ಕಟ್ಟಲು ಅಸಾಧ್ಯದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಹಣಕಾಸು ಸಂಸ್ಥೆಯವರಿಂದ ಕಿರುಕುಳ ಮುಂದುವರೆದಿದ್ದು, ಕಾರ್ಮಿಕರ ಬದುಕು ಸಂಕಷ್ಟಕ್ಕೆ ತಲಪಿದೆ. ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

ಬೇನಾಮಿ ಹೆಸರಿನಲ್ಲಿ ಕೋಟ್ಯಾಂತರ ಹಣವನ್ನು ಸಂಘಗಳ ಮೂಲಕ ನೀಡಿ ಅಧಿಕ ಬಡ್ಡಿ ವಸೂಲಿ ಮಾಡಲಾಗುತ್ತಿದೆ. ಆ ಮೂಲಕ ಕಾರ್ಮಿಕರನ್ನು ಶೋಷಿಸಲಾಗುತ್ತಿದೆ. ಈ ಹಣದ ಮೂಲವನ್ನು ಪತ್ತೆಹಚ್ಚಬೇಕು. ಈ ಹಿಂದೆ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಸರ್ಕಾರದಿಂದ ಸ್ಪಷ್ಟತೆ ಬರುವವರೆಗೂ ನಾವುಗಳು ಸಾಲ ಮರುಪಾವತಿ ಮಾಡುವದಿಲ್ಲ ಎಂದು ಘೋಷಿಸಿದರು.

ತಕ್ಷಣ ಮೈಕ್ರೋ ಫೈನಾನ್ಸ್ ಮತ್ತು ಖಾಸಗಿ ಹಣಕಾಸು ಸಂಸ್ಥೆಯ ಪ್ರತಿನಿಧಿಗಳು, ಸಂಘದ ಸದಸ್ಯರುಗಳ ಸಭೆಯನ್ನು ತಹಸೀಲ್ದಾರ್ ಮತ್ತು ಪೊಲೀಸ್ ಠಾಣಾಧಿಕಾರಿಗಳ ಸಮ್ಮುಖ ನಡೆಸಬೇಕು. ಸಾಲ ಮರುಪಾವತಿಸಲು ಕಿರುಕುಳ ನೀಡಬಾರದು ಎಂಬಿತ್ಯಾದಿ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ತಾಲೂಕು ತಹಸೀಲ್ದಾರ್ ಮಹೇಶ್ ಅವರ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಪ್ರಮುಖರಾದ ಹಸನಬ್ಬ, ಗ್ರಾ.ಪಂ. ಸದಸ್ಯರಾದ ಕೆ.ಪಿ. ದಿನೇಶ್, ದೇವಿಪ್ರಸಾದ್, ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ನಿರ್ವಾಣಪ್ಪ, ಟಿ.ಈ. ಸುರೇಶ್, ಪ್ರತಾಪ್, ನಾಗರಾಜು, ಮಂಜುಳಾ, ಸಂಧ್ಯಾ, ಗೀತಾ, ರೂಪ, ಪ್ರಮೀಳಾ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.