ಮಡಿಕೇರಿ, ಡಿ. 17: ‘ರೈತನ ಗದ್ದೆ ಸರಕಾರದತ್ತ’ ಶೀರ್ಷಿಕೆಯಡಿಯಲ್ಲಿ ತಾ. 7 ರಂದು ‘ಶಕ್ತಿ’ಯಲ್ಲಿ ಪ್ರಕಟಗೊಂಡಿರುವ ಸುದ್ದಿ ಸಂಬಂಧ ಇಂದು ಬೆಳಗಾವಿ ಅಧಿವೇಶನದಲ್ಲಿ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸರಕಾರದ ಗಮನ ಸೆಳೆದರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಇತ್ತೀಚೆಗೆ ನಾಪೋಕ್ಲು ನಾಲ್ನಾಡ್ ಪ್ಲಾಂಟರ್ಸ್ ಕ್ಲಬ್ ಹಾಗೂ ಸ್ಥಳೀಯ ಚುನಾಯಿತ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಕೃಷಿ ಚಟುವಟಿಕೆ ಕಾರ್ಯಾಗಾರದಲ್ಲಿ ಕೃಷಿ ಇಲಾಖೆಯಿಂದ ಬಿತ್ತರಿಸಿದ್ದ ಬಿತ್ತಿ ಪತ್ರದ ಬಗ್ಗೆ ಬೊಟ್ಟು ಮಾಡಿದರು.‘ಶಕ್ತಿ’ ವರದಿಯಲ್ಲಿ ಉಲ್ಲೇಖಿಸಿರುವಂತೆ ಆ ಬಿತ್ತಿ ಪತ್ರದಲ್ಲಿ ‘ಭತ್ತ ಬೆಳೆಯುವತ್ತ ರೈತನ ಚಿತ್ತ ಇಲ್ಲದಿದ್ದರೆ ಗದ್ದೆ ಸರಕಾರದತ್ತ’ ಎಂದು ಘೋಷಿಸಿದ್ದನ್ನು ಸುನಿಲ್ ಸುಬ್ರಮಣಿ ಪ್ರಸ್ತಾಪಿಸಿದರು. ಕಾರ್ಯಾಗಾರದಲ್ಲಿ ಈ ಘೋಷಣಾ ಫಲಕದ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ರೈತರು ಪ್ರಶ್ನಿಸಲಾಗಿ, ಅದು ಸರಕಾರದ ಆದೇಶ ಎಂದು ಉತ್ತರ ಲಭಿಸಿದ್ದಾಗಿಯೂ ಸುನಿಲ್ ಬೊಟ್ಟು ಮಾಡಿದರು.ಅಲ್ಲದೆ ಸರಕಾರದಿಂದ ರೈತ ಬೆಳೆಯುವ ಕೃಷಿಗೆ ಯಾವದೇ ಸಹಾಯಧನ ಅಥವಾ ಪ್ರೋತ್ಸಾಹಧನ ನೀಡದೆ ಗದ್ದೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಯತ್ನ ನಡೆದಿದೆ ಎಂದು ರೈತರು ಆತಂಕಗೊಂಡಿದ್ದಾಗಿ ನೆನಪಿಸಿದರು. ಈ ಪ್ರಸ್ತಾಪಕ್ಕೆ ಸ್ಪಂದಿಸಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು, ಮೇಲ್ಮನೆ ಸದಸ್ಯರ ಪ್ರಸ್ತಾವನೆಗೆ ಕೃಷಿ ಸಚಿವರು ಸೂಕ್ತ ಉತ್ತರ ನೀಡಬೇಕೆಂದು ನಿರ್ದೇಶಿಸಿದರು.ಆ ಬಗ್ಗೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು, ತಮಗೆ ಈ ಬಗ್ಗೆ ಯಾವದೇ ಮಾಹಿತಿ ಇಲ್ಲವೆಂದೂ, ಸರಕಾರದ ಕೃಷಿ ಭೂಮಿ ಸ್ವಾಧೀನದಂತಹ ನಿರ್ಧಾರ ಕೈಗೊಂಡಿಲ್ಲವೆಂದು ಸಮಜಾಯಿಷಿಕೆ ನೀಡಿದರು. ಮಾತ್ರವಲ್ಲದೆ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ತಿಳುವಳಿಕೆ ಪಡೆದು ಸದನಕ್ಕೆ ಮಾಹಿತಿ ನೀಡುವದಾಗಿ ಸ್ಪಷ್ಟಪಡಿಸಿದರು.
ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್‍ನಲ್ಲಿ ಜರುಗಿದ ಕಾರ್ಯಾಗಾರದಲ್ಲಿ ಬಿತ್ತರಿಸಿದ ಘೋಷವಾಕ್ಯ ಸಂಬಂಧ ‘ಶಕ್ತಿ’ ಸಚಿತ್ರ ವರದಿಯೊಂದಿಗೆ ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.