ಸೋಮವಾರಪೇಟೆ, ಡಿ. 17: ಹಲವಷ್ಟು ಸರ್ಕಾರಿ ಇಲಾಖಾ ಕಚೇರಿ, ತಾಲೂಕು ಆಡಳಿತದ ಕೇಂದ್ರ ಸ್ಥಾನವನ್ನು ಹೊಂದಿರುವ ಸೋಮವಾರಪೇಟೆ ತಾಲೂಕು ಕಚೇರಿಗೆ ಸುಣ್ಣ ಬಣ್ಣ ಬಳಿಯಲೂ ಸಹ ಸರ್ಕಾರದ ಬಳಿ ಹಣವಿಲ್ಲವೇ? ಅಥವಾ ಸರ್ಕಾರಿ ಕಟ್ಟಡಕ್ಕೆ ಸುಣ್ಣ ಬಣ್ಣ ಏಕೆ ? ಎಂಬ ಅಸಡ್ಡೆ ಅಧಿಕಾರಿಗಳಿಗಿದೆಯೇ ಎಂಬ ಸಂಶಯ ಮೂಡುವಂತಾಗಿದೆ.

ಸೋಮವಾರಪೇಟೆ ತಾಲೂಕು ಪ್ರಮುಖವಾಗಿ 6 ಹೋಬಳಿಗಳನ್ನು ಹೊಂದಿದ್ದು, ಪಟ್ಟಣದ ಹೃದಯ ಭಾಗದಲ್ಲಿ ತಾಲೂಕು ಆಡಳಿತ ಕಚೇರಿ ಇದೆ. ಮಿನಿ ವಿಧಾನಸೌಧ ಎಂಬ ನಾಮಾಂಕಿತದೊಂದಿಗೆ ಕಾಮಗಾರಿ ನಡೆಯಲ್ಪಟ್ಟ ಸೋಮವಾರಪೇಟೆ ತಾಲೂಕು ಕಚೇರಿ ಇಲ್ಲಿಯವರೆಗೆ ಸುಣ್ಣ ಬಣ್ಣದ ಭಾಗ್ಯ ಕಂಡಿಲ್ಲ.

ತಾಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳ ಕಚೇರಿ, ಆಹಾರ ಇಲಾಖೆ, ಭೂಮಿ ಕೇಂದ್ರ, ನೆಮ್ಮದಿ ಕೇಂದ್ರ, ಆರ್‍ಟಿಸಿ ವಿತರಣಾ ಕೇಂದ್ರ, ಶಿರಸ್ತೇದಾರ್ ಕಚೇರಿ, ಅಭಿಲೇಖಾಲಯ, ಚುನಾವಣಾ ಶಾಖೆ, ಖಜಾನೆ ಸೇರಿದಂತೆ ಇನ್ನಿತರ ಸರ್ಕಾರಿ ಕಚೇರಿಗಳನ್ನು ಹೊಂದಿರುವ ತಾಲೂಕು ಕಚೇರಿ ಸಂಕೀರ್ಣ ಹೊರಭಾಗದಿಂದ ನೋಡಿದರೆ ಪಾಳುಬಿದ್ದಿರುವ ಭೂತ ಬಂಗಲೆಯಂತೆ ಕಾಣಬರುತ್ತಿದೆ.

ತಾಲೂಕು ಕಚೇರಿಗೆ ಸುಣ್ಣ ಬಣ್ಣ ಬಳಿಯುವಂತೆ ಹಲವಷ್ಟು ಬಾರಿ ಸಾರ್ವಜನಿಕ ಸಂಘ ಸಂಸ್ಥೆಗಳು ಮನವಿ ಮಾಡಿದ್ದರೂ ಸಹ ಯಾವದೇ ಪ್ರಗತಿಯಾಗಿಲ್ಲ. ಹೊರ ಭಾಗದಲ್ಲಿ ಶಿಥಿಲಾವಸ್ಥೆಗೆ ತಲಪಿರುವ ಕಚೇರಿ ಕಟ್ಟಡದ ಅವ್ಯವಸ್ಥೆ ಒಳಭಾಗದಲ್ಲೂ ಭಿನ್ನವಾಗಿಲ್ಲ. ಮಳೆಗಾಲದಲ್ಲಿ ಆರ್‍ಸಿಸಿ ಛಾವಣಿ ಯಿಂದ ನೀರು ಸೋರಿಕೆಯಾಗುತ್ತಿದ್ದು, ಕಡತಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಮಾಡಬೇಕಾಗುತ್ತದೆ.

ಇನ್ನು ಸೋರುವ ನೀರನ್ನು ಸಂಗ್ರಹಿಸಲು ಕಚೇರಿಯ ಒಳಗೆ ಬಕೆಟ್‍ಗಳನ್ನು ಇಟ್ಟುಕೊಳ್ಳುವ ಸ್ಥಿತಿಯೂ ನಿರ್ಮಾಣವಾಗುತ್ತಿದ್ದು, ಕೆಲ ಕೊಠಡಿಗಳ ಒಳಭಾಗದಲ್ಲಿ ಟಾರ್ಪಲ್, ಪ್ಲಾಸ್ಟಿಕ್‍ಗಳನ್ನು ಅಳವಡಿಸಿಕೊಳ್ಳಬೇಕಿದೆ. ಇದರೊಂದಿಗೆ ಕಿಟಕಿ ಗ್ಲಾಸ್‍ಗಳು ಒಡೆದು ಹೋಗಿದ್ದು, ಮಳೆ ನೀರಿನ ಎರಚಲು ಒಳಬರದಂತೆ ತಡೆಯಲು ಪ್ಲಾಸ್ಟಿಕ್‍ಗಳನ್ನು ಕಟ್ಟಲಾಗಿದೆ.

ಕಳೆದ ತಾ. 25.1.1997ರಂದು ಕಂದಾಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ವತಿಯಿಂದ ಸೋಮವಾರಪೇಟೆ ಯಲ್ಲಿ ನೂತನ ಮಿನಿ ವಿಧಾನಸೌಧ ನಿರ್ಮಿಸಲಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಸಮರ್ಪಕವಾಗಿ ನಿರ್ವಹಣೆಯನ್ನೇ ಮಾಡಿಲ್ಲ.

1997ರಂದು ಅಂದಿನ ಸರ್ಕಾರ ದಲ್ಲಿ ಕಂದಾಯ ಸಚಿವರಾಗಿದ್ದ ರಮೇಶ್ ಸಿ. ಜಿಗಜಣಗಿ ಅವರು ಈ ಸಂಕೀರ್ಣವನ್ನು ಉದ್ಘಾಟಿಸಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರಚಾರ ಇಲಾಖಾ ಸಚಿವರಾಗಿದ್ದ ಯಂ.ಸಿ. ನಾಣಯ್ಯ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನಾ ಸಮಯದಲ್ಲಿ ಜಗಮಗಿಸುತ್ತಿದ್ದ ಕಟ್ಟಡ ಇಂದು ಸುಣ್ಣ ಬಣ್ಣ ಕಾಣದೇ ಭೂತ ಬಂಗಲೆಯಂತಾಗಿದೆ.

ಕಟ್ಟಡವನ್ನು ದುರಸ್ತಿಗೊಳಿಸಲು ಕ್ರಮ ವಹಿಸುವಂತೆ ಸೋಮವಾರ ಪೇಟೆ ಲೋಕೋಪಯೋಗಿ ಇಲಾಖೆಗೆ ತಾಲೂಕು ಕಚೇರಿಯಿಂದ ಮನವಿ ಮಾಡಿಕೊಳ್ಳಲಾಗಿದ್ದು, ಇದುವರೆಗೂ ಕಾಮಗಾರಿ ನಡೆದಿರುವ ಕುರುಹು ಕಂಡು ಬಂದಿಲ್ಲ. ಕಟ್ಟಡದಲ್ಲಿ ಅಸುರಕ್ಷತೆಯ ನೆಪವೊಡ್ಡಿ ಈಗಾಗಲೇ ಉಪ ನೋಂದಣಾಧಿಕಾರಿಗಳ ಕಚೇರಿ ಹೊರಬಿದ್ದಿದ್ದು, ಖಾಸಗಿ ಕಟ್ಟಡದಲ್ಲಿ ಸಾವಿರಾರು ಹಣ ಬಾಡಿಗೆ ನೀಡಿ ಕಾರ್ಯಾಚರಿಸುತ್ತಿದೆ. ತಾಲೂಕು ಕಚೇರಿಯ ಬಗ್ಗೆ ಇದೇ ನಿರ್ಲಕ್ಷ್ಯ ಮುಂದುವರೆದರೆ ಮುಂದಿನ ದಿನಗಳಲ್ಲಿ ಎಲ್ಲಾ ಕಚೇರಿಗಳೂ ಖಾಸಗಿ ಕಟ್ಟಡಕ್ಕೆ ಸ್ಥಳಾಂತರ ಗೊಂಡರೂ ಅಚ್ಚರಿಪಡಬೇಕಿಲ್ಲ ಎಂಬಂತಾಗಿದೆ.

- ವಿಜಯ್ ಹಾನಗಲ್