ಮಡಿಕೇರಿ, ಡಿ. 18: ಮಡಿಕೇರಿ ನಗರಸಭೆಗೆ ಒಳಪಡುವ ಮೂರು ಸರ್ಕಾರಿ ಶಾಲೆಗಳ ಶಿಕ್ಷಕರುಗಳಿಗೆ ವೇತನ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಇನ್ನು ಒಂದು ತಿಂಗಳೊಳಗೆ ಶಿಕ್ಷಕರಿಗೆ ವೇತನ ನೀಡಲು ನಗರಸಭೆ ಮುಂದಾಗದಿದ್ದಲ್ಲಿ ಸಮಿತಿ ವತಿಯಿಂದ ನಗರಸಭೆಯ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವದೆಂದು ಎಚ್ಚರಿಕೆ ನೀಡಿದ್ದಾರೆ.

ವೇತನ ವಂಚಿತ ಶಿಕ್ಷಕರುಗಳಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ದಲಿತ ಸಂಘರ್ಷ ಸಮಿತಿ ವತಿಯಿಂದ ಮಡಿಕೇರಿ ನಗರಸಭೆ ವ್ಯಾಪ್ತಿಗೆ ಒಳಪಡುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ, ‘ಗುರುದಕ್ಷಿಣೆಗಾಗಿ ನಡೆ’ ಎನ್ನುವ ವಿನೂತನ ಪ್ರತಿಭಟನಾ ಜಾಥಾದ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಶಿಕ್ಷಕರು ವೇತನದಿಂದ ವಂಚಿತರಾಗಿದ್ದು, ಗುತ್ತಿಗೆ ಆಧಾರದ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ವೇತನ ದೊರೆಯುತ್ತಿಲ್ಲ. ಅಲ್ಲದೆ ಗೌರವ ಧನದ ರೂಪದಲ್ಲಿ ವೇತನವನ್ನು ನೀಡಬೇಕಾಗಿದ್ದ ನಗರಸಭೆ ಕಳೆದ ಅನೇಕ ವರ್ಷಗಳಿಂದ ಈ ಶಿಕ್ಷಕರಿಗಾಗಿ ಯಾವದೇ ಅನುದಾನವನ್ನು ಮೀಸಲಿಡದೆ ವಂಚಿಸುತ್ತಲೇ ಬಂದಿದೆ ಎಂದು ಆರೋಪಿಸಿದರು.

ಪ್ರಸ್ತುತ ದಿನಗಳಲ್ಲಿ ಪೋಷಕರು ಖಾಸಗಿ ಶಾಲೆಗಳಿಗೆ ಮಾರುಹೋಗುತ್ತಿದ್ದು, ಬಡ ವಿದ್ಯಾರ್ಥಿಗಳು ಮಾತ್ರ ಸರಕಾರಿ ಶಾಲೆಗಳಿಗೆ ಬರುತ್ತಿದ್ದಾರೆ. ಇಂತಹ ಬಡ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮ ಪಡುತ್ತಿದ್ದು, ಅಂತಹ ಶಿಕ್ಷಕರನ್ನು ಪ್ರೋತ್ಸಹಿಸದೆ ವಂಚಿಸುತ್ತಿರುವದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಯಾವಾಗಲೂ ಆ ಶಾಲೆಗೆ ಹಾಗೂ ಶಿಕ್ಷಕರಿಗೆ ಅಬಾರಿಯಾಗಿರಬೇಕು ಎಂದ ದಿವಾಕರ್; ಮುಂದಿನ ದಿನಗಳಲ್ಲಿಯೂ ಸಂಘಟನೆ ವತಿಯಿಂದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವದಾಗಿ ತಿಳಿಸಿದರು.

ಉದ್ಯಮಿ ಶರೀನ್ ಮಾತನಾಡಿ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರೋತ್ಸಾಹ ನೀಡುತ್ತಿರುವದು ಶ್ಲಾಘನೀಯ ಎಂದರು. ವಿದ್ಯಾರ್ಥಿಗಳನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯುವ ಶಿಕ್ಷಕರಿಗೆ ವೇತನ ನೀಡದೆ ವಂಚಿಸುತ್ತಿರುವದು ಸರಿಯಲ್ಲ ಎಂದರು.

ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯುವ ಅಗತ್ಯವಿದೆ ಎಂದರು.

ಲಯನ್ಸ್ ಸಂಸ್ಥೆ ಅಧ್ಯಕ್ಷ ದಾಮೋದರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು, ಶಾಲೆ ಮುಚ್ಚುವಂತಹ ಪರಿಸ್ಥಿತಿ ಎದುರಾಗಿದೆ. ಆದರೆ ಸರಕಾರಿ ಶಾಲೆಗಳು ಉಳಿಯಬೇಕೆನ್ನುವ ಏಕೈಕ ಉದ್ದೇಶದಿಂದ ಶಿಕ್ಷಕರು ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಪರಿಶ್ರಮ ಪಡುತ್ತಿರುವದು ಶ್ಲಾಘನೀಯವೆಂದರು.

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನಗರಸಭೆಯ ಆಡಳಿತ ಮಂಡಳಿ ಶಾಲೆಗಳ ನಿರ್ವಹಣೆಗೆ ಮತ್ತು ಶಿಕ್ಷಕರಿಗೆ ವೇತನ ನೀಡಿ ಸಹಕರಿಸುವಂತೆ ಮನವಿ ಮಾಡಿದರು.

ರೂ. 38 ಸಾವಿರ ವಿತರಣೆ

ಶಿಕ್ಷಕರುಗಳಿಗೆ ಗುರುದಕ್ಷಿಣೆ ರೂಪದಲ್ಲಿ ಆರ್ಥಿಕ ನೆರವು ನೀಡಲು ಸಾರ್ವಜನಿಕರಿಂದ ಎರಡು ದಿನಗಳ ಕಾಲ ಸಂಗ್ರಹಿಸಿದ 38,800 ರೂ. ಗಳನ್ನು ಮಡಿಕೇರಿ ನಗರಸಭೆಗೆ ಒಳಪಡುವ ಮೂರು ಸರ್ಕಾರಿ ಶಾಲೆಗಳ ಶಿಕ್ಷಕರುಗಳಿಗೆ ಹಸ್ತಾಂತರಿಸಲಾಯಿತು. ಉದ್ಯಮಿ ಮನೋರಂಜನ್, ವಕೀಲರಾದ ಪವನ್ ಪೆಮ್ಮಯ್ಯ, ದಸಂಸ ತಾಲೂಕು ಅಧ್ಯಕ್ಷ ದೀಪಕ್, ಸಂಚಾಲಕ ಕುಮಾರ್, ಖಜಾಂಚಿ ಪ್ರೇಮ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.