ಮಡಿಕೇರಿ, ಡಿ. 18: ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಬಿಲ್ಲವ ಅಸೋಸಿಯೇóನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿಯ ಸರಕಾರಿ ನೌಕರರ ಭವನದಲ್ಲಿ ನೆರೆ ಪರಿಹಾರ ವಿತರಣೆ ಕಾರ್ಯಕ್ರಮ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಎಂ. ರಾಜಶೇಖರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಲ್ಲವ ಅಸೋಸಿಯೇಶನ್‍ನ ಅಧ್ಯಕ್ಷ ಎಂ. ವೇದಕುಮಾರ್, ಹಿರಿಯ ಉಪಾಧ್ಯಕ್ಷ ರಮೇಶ್ ಬಂಗೇರ, ಉಪಾಧ್ಯಕ್ಷ ಕೇಶವ ಪೂಜಾರಿ, ಖಜಾಂಚಿ ಮಾಚ ಬಿಲ್ಲವ, ಸಂಘಟನಾ ಕಾರ್ಯದರ್ಶಿಯಾಗಿ ಉದಯಕುಮಾರ್ ಆಗಮಿಸಿದ್ದರು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ವೇದಕುಮಾರ್ ಇವರು ನೊಂದವರಿಗೆ ಸಹಾಯ ಮಾಡುವದು ಎಲ್ಲಾ ಮಾನವರ ಕರ್ತವ್ಯ. ಕೊಡಗಿನಲ್ಲಿ ಅತಿವೃಷ್ಟಿಯಿಂದ ಜನರ ಬದುಕು ದುಸ್ತರವಾಗಿ ಆಸ್ತಿ, ಮನೆ ಕಳೆದುಕೊಂಡು ಸಂಕಷ್ಟದಲ್ಲಿ ಇದ್ದಾರೆ. ಇಂತಹ ಸಮಯದಲ್ಲಿ ನಮ್ಮ ಸಮಾಜದ ಬಂಧುಗಳಿಗೆ ನಮ್ಮಿಂದಾಗುವ ಸಹಾಯ ಮಾಡಲು ನಿರ್ಧರಿಸಿದ ಬಗ್ಗೆ ವಿವರಿಸಿದರು. ಸಂತ್ರಸ್ತರ ಕುಟುಂಬದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಲ್ಲಿ ಅವರ ಉನ್ನತ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಭರಿಸುವದಾಗಿ ಹೇಳಿದರು.
ಮಾಚ ಬಿಲ್ಲವ ಮಾತನಾಡಿ, ಇಂತಹ ಒಳ್ಳೆಯ ಕಾರ್ಯಕ್ರಮಗಳು ಮುಂದೆಯೂ ನಡೆಯುತ್ತಿರಲಿ, ನೆರೆಯಿಂದಾಗಿ ನಮ್ಮ ಸಮಾಜದ ಬಂಧುಗಳು ಧೈರ್ಯವನ್ನು ಕಳೆದುಕೊಳ್ಳದೆ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದು ಕರೆಯಿತ್ತರು. ಇಂತಹ ಸಂಕಷ್ಟದ ಸಮಯದಲ್ಲಿ ನಾವು ನಿಮಗೆ ನೈತಿಕ ಭರವಸೆಯನ್ನಷ್ಟೆ ತುಂಬುತ್ತಿದ್ದೇವೆ ಎಂದು ಹೇಳಿದರು.
ಬಿ.ಎಂ. ರಾಜಶೇಖರ್ ಆಯ್ದ 10 ಕುಟುಂಬಗಳಿಗೆ ಮಾತ್ರ ಪರಿಹಾರ ವಿತರಣೆ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಕುಲಬಾಂಧವರಿಗೆ ಪರಿಹಾರ ನೀಡಲಿದ್ದೇವೆ. ಈಗಾಗಲೇ ಮಂಗಳೂರು, ಉಡುಪಿ, ಬಾಂಬೆ ಮತ್ತು ಇತರ ಜಿಲ್ಲೆಗಳ ಬಿಲ್ಲವ ಸಂಘಗಳನ್ನು ಸಂಪರ್ಕಿಸಿದ್ದೇವೆ. ಅವರಿಂದ ಸಂಗ್ರಹಿಸಿದ ಹಣವನ್ನು ನಮ್ಮ ಸಮಾಜದ ಮಹಾಸಭೆಯಂದು ವಿತರಿಸುತ್ತೇವೆ ಎಂದು ತಿಳಿಸಿದರು.
ನೆರೆ ಸಂತ್ರಸ್ತರ ಆಯ್ದ 10 ಕುಟುಂಬಗಳಿಗೆ ತಲಾ ರೂ. 10 ಸಾವಿರದಂತೆ ಪರಿಹಾರ ಮೊತ್ತವನ್ನು ವಿತರಿಸಲಾಯಿತು.
ಸಭೆಯಲ್ಲಿ ಮಡಿಕೇರಿ ಸಮಾಜದ ಪ್ರಮುಖರಾದ ಬಿ.ಎ. ಅರುಣಕುಮಾರ್ ಬಿ.ಎಂ. ಪೂವಪ್ಪ ಕಕ್ಕಬೆ, ವಿನೋದ್ ಕುಮಾರ್, ಬಿ.ಡಿ. ಕೃಷ್ಣಪ್ಪ, ಬಿ.ಸಿ. ಸುರೇಶ್, ಕೀರ್ತಿಕುಮಾರ್, ಬಿ.ಎಂ. ಪೂವಪ್ಪ ಮಡಿಕೇರಿ ಮತ್ತು ಇತರರು ಉಪಸ್ಥಿತರಿದ್ದರು.
ಖಜಾಂಚಿ ಬಿ.ಕೆ. ಮಹೇಶ್ ಸ್ವಾಗತಿಸಿದರೆ, ಬಿ.ಎಸ್. ಜಯಪ್ಪ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.