ಸುಂಟಿಕೊಪ್ಪ, ಡಿ. 18: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾ ದಿನಾಚರಣೆಯನ್ನು ಕಾಲೇಜಿನ ಪ್ರಾಚಾರ್ಯ ಜಾನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಂಪ್ಯೂಟರ್, ಮೊಬೈಲ್ನಲ್ಲಿ ಆಟ ಆಡುತ್ತಾ ಕಾಲ ಕಳೆಯದೆ ದೈಹಿಕ ಬಲಾಢ್ಯಕ್ಕೆ, ಶಾರೀರಿಕ ಸದೃಢತೆಗೆ ಸಹಕಾರಿಯಾಗುವಂತಹ ಕ್ರೀಡೆಯಲ್ಲಿ ತೊಡಗಿಸಿಕೊಂಡಲ್ಲಿ ಉತ್ತಮ ಆರೋಗ್ಯದ ಜೊತೆಗೆ ತಮ್ಮಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಿ ಗುರುತಿಸಿಕೊಳ್ಳಲು ಇದು ಉತ್ತಮ ಅವಕಾಶ. ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಕ್ರೀಡಾಪಟುಗಳಿಂದ ಕ್ರೀಡಾ ಜ್ಯೋತಿಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವೈ.ಎಂ. ಕರುಂಬಯ್ಯ, ಖಜಾಂಚಿ ರಮೇಶ್ ಪಿಳ್ಳೆ ಸ್ವೀಕರಿಸಿದರು. ಕ್ರೀಡಾ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಕಬಡ್ಡಿ, ಥ್ರೋಬಾಲ್, ವಾಲಿಬಾಲ್, ಕೆರೆದಡ, ಹಗ್ಗ ಜಗ್ಗಾಟ ಬಿರುಸಿನ ನಡಿಗೆ ರಂಗೋಲಿ ಸ್ಪರ್ಧೆ, ಚಿತ್ರ ಕಲೆ, ಗೀತ ಗಾಯನ ಮುಂತಾದ ಸ್ಪರ್ಧೆಗಳು ನಡೆಸಲಾಯಿತು. ತೀರ್ಪುಗಾರರಾಗಿ ಉಪನ್ಯಾಸಕ ಸೋಮಚಂದ್ರ, ಫಿಲಿಪ್ ವಾಸ್, ಕಾವ್ಯ, ಬೆಳ್ಯಪ್ಪ, ನಿರ್ವಹಿಸಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಎಸ್.ಹೆಚ್. ಈಶ ಪದ್ಮಾವತಿ, ಸುಕನ್ಯಾ, ಕೆ.ಸಿ ಕವಿತಾ, ಜಯಶ್ರೀ, ಕವಿತಾ ಭಕ್ತ್, ಕೆ.ಸ್. ಮಂಜುಳಾ ಉಪಸ್ಥಿತರಿದ್ದರು.