ಗೋಣಿಕೊಪ್ಪ ವರದಿ, ಡಿ. 18 : ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆದ ಎ. ಡಿವಿಜನ್ ಹಾಕಿ ಲೀಗ್ ಟೂರ್ನಿಯಲ್ಲಿ 4 ತಂಡಗಳು ಸೆಮಿಫೈನಲ್ಗೆ ಪ್ರವೇಶ ಪಡೆದಿದ್ದು, 13 ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ.
ಹೆಚ್ಚು ಅಂಕಗಳಿಸಿದ ಟಾಟಾ ಕಾಫಿ, ನಾಪೋಕ್ಲು ಶಿವಾಜಿ, ಬೇಗೂರು ಈಶ್ವರ ಯೂತ್ಕ್ಲಬ್ ಹಾಗೂ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡಗಳು ಸೆಮಿ ಫೈನಲ್ ಲಗ್ಗೆ ಇಟ್ಟವು. ಡಿಸೆಂಬರ್ 29 ರಂದು ನಡೆಯುವ ಸೆಮಿಫೈನಲ್ ಹಣಾಹಣಿ ಯಲ್ಲಿ ಫೈನಲ್ಗೆ ಹೋರಾಟ ನಡೆಯಲಿದೆ.
ಬ್ಲೂಸ್ಟಾರ್ ಪೊದ್ದ್ಮಾನಿ, ಡಾಲ್ಪಿನ್ಸ್, ಹಾತೂರು ಯೂತ್ ಕ್ಲಬ್, ಬಿಬಿಸಿ, ಎಂ.ಆರ್.ಎಫ್. ಮೂರ್ನಾಡು, ಬಲಮುರಿ, ಚಾರ್ಮರ್ಸ್, ಯುನೈಟೆಡ್ ಮರ್ಕರಾ, ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್, ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್, ಯುಎಸ್ಸಿ ಬೇರಳಿನಾಡ್, ಹುದಿಕೇರಿ ಮಲೆನಾಡ್, ಕೋಣನಕಟ್ಟೆ ತಂಡಗಳು ಹೊರ ಬಿದ್ದವು.
ಇಂದು ನಡೆದ ಪಂದ್ಯಗಳಲ್ಲಿ 2 ತಂಡಗಳು ಗೆಲವು ದಾಖಲಿಸಿದವು. ಉಳಿದಂತೆ 3 ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಮರ್ಕರಾ ಯುನೈಟೆಡ್ ಹಾಗೂ ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡಗಳ ನಡುವಿನ ಪಂದ್ಯ ಗೊಲು ದಾಖಲಿಸಲಾಗದೆ ಡ್ರಾ ಸಾಧನೆ ಮಾಡಿತು. ಬೇರಳಿನಾಡ್ ಗೈರಾದ ಕಾರಣ ಬೇಗೂರು ಈಶ್ವರ ಯೂತ್ ಕ್ಲಬ್ ತಂಡ ವಿಜಯಿ ಎಂದು ಘೋಷಿಸಲಾಯಿತು. ಲೀಗ್ನಲ್ಲಿ ಗೈರಾದ ಕಾರಣ ನಿಯಮದಂತೆ ಬೇಗೂರು ತಂಡಕ್ಕೆ 5 ಗೋಲುಗಳ ಮೂಲಕ 3 ಅಂಕ ನೀಡಲಾಯಿತು.
ಕೋಣನಕಟ್ಟೆ ಇಲೆವೆನ್ ಹಾಗೂ ಮಲೆನಾಡ್ ತಂಡಗಳ ನಡುವಿನ ಪಂದ್ಯ 2-2 ಗೋಲು ಡ್ರಾದಲ್ಲಿ ಅಂತ್ಯವಾಯಿತು. ಕೋಣನಕಟ್ಟೆ ಪರ 8ನೇ ನಿಮಿಷದಲ್ಲಿ ಸಾವನ್, 34ರಲ್ಲಿ ದೀಪಕ್, ಮಲೆನಾಡ್ ಪರ 37ರಲ್ಲಿ ನೀಲ್, 43 ರಲ್ಲಿ ಇಶನ್ ಗೋಲು ಹೊಡೆದರು.
ಹಾತೂರು ಯೂತ್ ಕ್ಲಬ್ ಹಾಗೂ ಟಾಟಾ ಕಾಫಿ ನಡುವಿನ ಪಂದ್ಯ 1-1ರಲ್ಲಿ ಡ್ರಾ ಆಯಿತು. ಹಾತೂರು ಪರ 26ರಲ್ಲಿ ಸಮಜ್, ಟಾಟಾ ಪರ 47ರಲ್ಲಿ ದಿಲನ್ ಗೋಲು ಹೊಡೆದರು. ನಾಪೋಕ್ಲು ಶಿವಾಜಿ ತಂಡವು ಬಿಬಿಸಿ ವಿರುದ್ಧ 4-1 ಗೋಲುಗಳ ಭರ್ಜರಿ ಗೆಲವು ದಾಖಲಿಸಿತು. ಶಿವಾಜಿ ಪರ 19 ಹಾಗೂ 44ನೇ ನಿಮಿಷದಲ್ಲಿ ಶುಭಂ, 3 ಹಾಗೂ 27ನೇ ನಿಮಿಷಗಳಲ್ಲಿ ಪುನಿತ್ ತಲಾ ಜೋಡಿ ಗೋಲು ಹೊಡೆದು ಮಿಂಚಿದರು. - ಸುದ್ದಿಪುತ್ರ