ವರದಿ-ವನಿತಾ ಚಂದ್ರಮೋಹನ್ಕು ಶಾಲನಗರ, ಡಿ 17: ಕುಶಾಲನಗರ ವ್ಯಾಪ್ತಿಯಲ್ಲಿ ಕೆಲವು ವರ್ಷಗಳಿಂದ ನಡೆದ ನಿಗೂಢ ಕೊಲೆಗಳ ರಹಸ್ಯ ಇನ್ನೂ ಬೇಧಿಸುವಲ್ಲಿ ಪೊಲೀಸ್ ಇಲಾಖೆ ಸಫಲವಾಗದೆ ಪ್ರಕರಣಗಳು ಕಡತದಲ್ಲಿ ಮಾತ್ರ ಇನ್ನೂ ಜೀವಂತವಾಗಿವೆ. ಈ ನಡುವೆ ಇತ್ತೀಚೆಗೆ ಕುಶಾಲನಗರದ ವೈದ್ಯರೊಬ್ಬರ ಬರ್ಬರ ಹತ್ಯೆ ಘಟನೆ ನಡೆದು ಒಂದು ವಾರ ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಗೆ ಸಾಧ್ಯವಾಗದಿರುವದು ಈ ಭಾಗದ ನಾಗರಿಕರಲ್ಲಿ ಆತಂಕ ಮೂಡಿಸಿದೆ.ಹಲವು ವರ್ಷಗಳ ಹಿಂದೆ ಕುಶಾಲನಗರದ ಮಾರುಕಟ್ಟೆ ರಸ್ತೆಯಲ್ಲಿ ನೆಲೆಸಿದ್ದ ತಮಿಳುನಾಡು ಮೂಲದ ಕಾಫಿ ಉದ್ಯಮಿಯ ಬರ್ಬರ ಹತ್ಯೆ ಪ್ರಕರಣ, ಮುಳ್ಳುಸೋಗೆ ಬಳಿ ನಡೆದ ಹಸ್ಕ್ ಕೃಷ್ಣ ಅಪಘಾತ ಪ್ರಕರಣ ನಂತರ ಕುಶಾಲನಗರದ ಆದಿಶಂಕರಾಚಾರ್ಯ ಬಡಾವಣೆಯಲ್ಲಿ ನಡೆದ ಕಾಫಿ ಕ್ಯೂರಿಂಗ್ ವಕ್ರ್ಸ್‍ನ ಕ್ಯಾಷಿಯರ್ ದಂಪತಿಗಳ ಬರ್ಬರ ಹತ್ಯೆ ಘಟನೆ ಇವುಗಳು ಕೇವಲ ತನಿಖಾ ಹಂತದಲ್ಲಿ ಉಳಿದಿದೆಯೇ ಹೊರತು ಇನ್ನೂ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ಸಫಲವಾಗದಿರುವದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಪ್ರಕರಣಗಳಲ್ಲಿ ಆರೋಪಿಗಳು ಹತ್ಯೆ ಮಾಡುವದ ರೊಂದಿಗೆ ಕೋಟ್ಯಾಂತರ ಹಣ ಲಪಟಾಯಿಸಿರುವದು ಕೂಡ ಇನ್ನೂ ನಿಗೂಢವಾಗಿಯೇ ಉಳಿದಿದೆ. ಕುಶಾಲನಗರದ ಉದ್ಯಮಿಯ ದಿಢೀರ್ ನಾಪತ್ತೆ ಪ್ರಕರಣ ಸೇರಿದಂತೆ ಹಲವು ಕಾಣೆಯಾದ ವ್ಯಕ್ತಿಗಳ ಸುಳಿವು ಕೂಡ ಪತ್ತೆಹಚ್ಚಲು ಸಾಧ್ಯವಾಗದೆ ಇಲಾಖೆ ಕೈಚೆಲ್ಲಿ ನಿಂತಿರುವ ಘಟನೆಗಳು ಕೂಡ ಜನವಲಯಗಳಲ್ಲಿ ಚರ್ಚೆಯಾಗುತ್ತಿದೆ.
ಒಂಟಿ ಕೊಲೆಗಳು, ನಿಗೂಢ ನಾಪತ್ತೆ ಪ್ರಕರಣಗಳು ಕುಶಾಲನಗರ ವ್ಯಾಪ್ತಿಯಲ್ಲಿ ದಿನಕಳೆದಂತೆ ಬೆಳಕಿಗೆ ಬರುತ್ತಿರುವದು ಆತಂಕದ ಬೆಳವಣಿಗೆಯಾಗಿದ್ದು, ಕುಶಾಲನಗರದಲ್ಲಿ ಕಳೆದ ಮೂರು ದಶಕಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ದಿಲೀಪ್‍ಕುಮಾರ್ ಅವರ ಹತ್ಯೆ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದ್ದು ಯಾವದೇ ಖಚಿತ ಸುಳಿವು ದೊರಕದಿರುವದು ಕೊಡಗು ಮೈಸೂರು ಭಾಗದ ನಾಗರಿಕರಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.
ಕುಶಾಲನಗರ ಸಮೀಪ ಕೊಪ್ಪ ಗ್ರಾಮದ ಮೈಸೂರು ಹೆದ್ದಾರಿ ಒತ್ತಿನಲ್ಲಿ ತಾ. 8 ರಂದು ರಾತ್ರಿ ತನ್ನ ಮನೆಯಲ್ಲಿ ದುಷ್ಕರ್ಮಿಗಳಿಂದ ಭೀಬತ್ಸವಾಗಿ ಕೊಲೆಗೀಡಾಗಿರುವ ಡಾ. ದಿಲೀಪ್‍ಕುಮಾರ್ 1992 ರಿಂದ ಕುಶಾಲನಗರದಲ್ಲಿ ಖಾಸಗಿ ಕ್ಲಿನಿಕ್ ಮೂಲಕ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುವದರೊಂದಿಗೆ ಬಡವರ ಪಾಲಿಗೆ ಸಂಜೀವಿನಿ ಎನಿಸಿಕೊಂಡಿದ್ದರು.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿಯ ಗ್ರಾಮವೊಂದರ ನಿವಾಸಿಯಾಗಿದ್ದ ಡಾ. ದಿಲೀಪ್ ಸ್ವಗ್ರಾಮದಲ್ಲಿ ಕಾಫಿ ಬೆಳೆÀಗಾರರಾಗಿದ್ದು, ವೈದ್ಯ ವ್ಯಾಸಂಗದ ನಂತರ ಪ್ರಾರಂಭದಲ್ಲಿ ಮೈಸೂರು ಬಳಿ ಸರಕಾರಿ ವೈದ್ಯರಾಗಿ ಸ್ವಲ್ಪ ದಿನ ಸೇವೆ ಸಲ್ಲಿಸಿದ್ದು ನಂತರ ತನ್ನ ಗ್ರಾಮಕ್ಕೆ ಹಿಂತಿರುಗಿ ಅಲ್ಲಿಯೂ ಶಾಶ್ವತವಾಗಿ ನೆಲೆ ಕಾಣದೆ ಕುಶಾಲನಗರದಲ್ಲಿ ಕಳೆದ 26 ವರ್ಷಗಳಿಂದ ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
ಈ ನಡುವೆ ಕೆಲವು ವರ್ಷಗಳ ಹಿಂದೆ ಸಮೀಪದ ಕೊಪ್ಪ ಗ್ರಾಮದಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡು ಒಂಟಿಯಾಗಿ ಮನೆಯಲ್ಲಿ ನೆಲೆಸಿದ್ದರು. ಇದರೊಂದಿಗೆ ಇಬ್ಬರು ವೃದ್ದ ಅನಾಥ ಮಹಿಳೆಯರನ್ನು ತಮ್ಮ ಮನೆಯ ಆವರಣದಲ್ಲಿ ನೆಲೆಸಲು ಅವಕಾಶ ಕಲ್ಪಿಸಿ ಅವರಿಗೆ ಸಹಾಯಹಸ್ತ ನೀಡಿದ್ದರು.
ಕುಶಾಲನಗರದ ಮುಖ್ಯರಸ್ತೆಯಲ್ಲಿ ತನ್ನದೇ ಆದ ಕ್ಲಿನಿಕ್ ಒಂದನ್ನು ಹೊಂದಿದ್ದ ಡಾ ದಿಲೀಪ್ ದಿನನಿತ್ಯ ಅಂದಾಜು 100 ರೋಗಿಗಳಿಗೆ ಚಿಕಿತ್ಸೆ ನೀಡುವದರೊಂದಿಗೆ ಸಂಜೆ ವೇಳೆ ಮನೆಯಲ್ಲಿ ಕೂಡ ರೋಗಿಗಳ ತಪಾಸಣೆ ಕೆಲಸ ನಿರ್ವಹಿಸುತ್ತಿದ್ದರು.
(ಮೊದಲ ಪುಟದಿಂದ) ಇತರ ಜನರೊಂದಿಗೆ ಹೆಚ್ಚು ಬೆರೆಯದ ಡಾ. ದಿಲೀಪ್ ಪ್ರತಿದಿನ ಸಂಜೆ 7.30ಕ್ಕೆ ಕ್ಲಿನಿಕ್ ಕೆಲಸ ಮುಗಿಸಿ ಸಮೀಪದ ಕೊಪ್ಪದಲ್ಲಿರುವ ಮನೆಗೆ ಹಿಂತಿರುಗು ವದು ವಾಡಿಕೆಯಾಗಿತ್ತು. ಡಾ. ದಿಲೀಪ್ ಡಿ.8 ರಂದು ತನ್ನ ಮನೆಯಲ್ಲಿ ಕೊಲೆಯಾಗಿ ಬಿದ್ದಿರುವ ಮಾಹಿತಿ ಹೊರ ಬೀಳುತ್ತಲೇ ಜನರಲ್ಲಿ ಅಚ್ಚರಿಯೊಂದಿಗೆ ಆತಂಕ ಮನೆ ಮಾಡಿತ್ತು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಡಿ.8 ರಂದು ವೈದ್ಯರು ತನ್ನ ಕ್ಲಿನಿಕ್ ಕೆಲಸ ಮುಗಿಸಿ ಸಂಜೆ 7.30 ಕ್ಕೆ ಎಂದಿನಂತೆ ತನ್ನ ಮನೆ ಕಡೆಗೆ ತೆರಳಿದ್ದಾರೆ. ಮನೆಯಲ್ಲಿ ಏಕಾಂಗಿಯಾಗಿರುವ ಡಾ.ದಿಲೀಪ್ ರಾತ್ರಿಯ ಊಟಕ್ಕೆ ಕೂಡ ಸಿದ್ದತೆ ನಡೆಸಿದ್ದಾರೆ. ಈ ನಡುವೆ ಆಗಂತಕರು ರೋಗಿಗಳ ವೇಷದಲ್ಲಿ ಮನೆಗೆ ನುಗ್ಗಿ ವೈದ್ಯರೊಂದಿಗೆ ರೋಗಿಯೊಬ್ಬನಿಗೆ ಚಿಕಿತ್ಸೆ ನೀಡುವಂತೆ ನಟನೆ ಮಾಡಿರುವ ಸುಳಿವು ಅಲ್ಲಿ ದೊರಕಿದ ದಾಖಲೆಗಳ ಪ್ರಕಾರ ಖಚಿತಗೊಂಡಿದೆ. ಘಟನೆ ಸಂದರ್ಭ ದುಷ್ಕರ್ಮಿಗಳ ತಂಡದ ಸದಸ್ಯರು ಮನೆಯಲ್ಲಿ ಇದ್ದ ಸಾಕು ನಾಯಿಯನ್ನು ಕೂಡ ಹತ್ಯೆಗೈದಿರು ವದು ಗೋಚರಿಸಿದೆ.
ಮನೆಯ ವಿದ್ಯುತ್ ಸಂಪರ್ಕ ಕೂಡ ಕಡಿತಗೊಳಿಸುವದರೊಂದಿಗೆ ಒಳನುಗ್ಗಿದ ತಂಡ ಏಕಾಏಕಿ ವೈದ್ಯರ ಮೇಲೆ ಎರಗಿದ್ದು ಕೈಕಾಲುಗಳನ್ನು ಕಟ್ಟಿಹಾಕಿ ಬಾಯಿಗೆ ಬಟ್ಟೆ ತುರುಕಿ ಪ್ಲಾಸ್ಟರ್ ಬಳಸಿ ನಂತರ ಮನೆಯಲ್ಲಿ ರುವ ಕಾರ್ಪೆಟ್ ಮೂಲಕ ಅವರ ಉಸಿರುಗಟ್ಟಿಸಿ ಹತ್ಯೆಗೈದಿರುವ ದೃಶ್ಯ ಡಿ.9 ರಂದು ಬೆಳಗ್ಗೆ ಗೋಚರಿಸಿದೆ.
ದುಷ್ಕರ್ಮಿಗಳು ತಮ್ಮ ಕೃತ್ಯ ಮುಗಿಸುವದರೊಂದಿಗೆ ಮನೆಯಲ್ಲಿದ್ದ ಕೆಲವು ಗಾದ್ರೆಜ್ ಮತ್ತು ವೈದ್ಯರ ಕೈಚೀಲಗಳ ತಪಾಸಣೆ ನಡೆಸಿದ್ದು ನಂತರ ಕೃತ್ಯ ನಡೆದ ಸ್ಥಳಕ್ಕೆ ಖಾರದ ಪುಡಿ ಚೆಲ್ಲಿ ತೆರಳಿರುವದು ಪೊಲೀಸರ ತನಿಖೆ ಸಂದರ್ಭ ಗೋಚರಿಸಿದೆ. ಹತ್ಯೆ ನಂತರ ವೈದ್ಯರ ಖಾಸಗಿ ಮೊಬೈಲ್ ಕೂಡ ನಾಪತ್ತೆಯಾಗಿದೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗುವದ ರೊಂದಿಗೆ ಮೈಸೂರು ಜಿಲ್ಲಾ ಪೊಲೀಸರು ಪ್ರಕರಣವನ್ನು ವಿಶೇಷ ವಾಗಿ ಪರಿಗಣಿಸಿದ್ದು ದುಷ್ಕರ್ಮಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಿದ್ದಾರೆ.
ಹತ್ಯೆಗೊಳಗಾದ ವೈದ್ಯ ದಿಲೀಪ್ ಹಣಕಾಸಿನಲ್ಲಿ ಸ್ಥಿತಿವಂತರಾಗಿದ್ದು ತನ್ನ ದುಡಿಮೆಯ ಹಣವನ್ನು ಬಹುತೇಕ ಕಡೆ ಹೂಡಿಕೆ ಮಾಡಿದ್ದು ಮೈಸೂರು, ಬೆಂಗಳೂರು, ಚಿಕ್ಕಮಗಳೂರು, ಕುಶಾಲನಗರ ಸೇರಿದಂತೆ ವಿವಿಧೆಡೆ 10 ಕ್ಕೂ ಅಧಿಕ ನಿವೇಶನಗಳನ್ನು ಖರೀದಿಸಿದ್ದಾರೆ. ಇದರೊಂದಿಗೆ ಲಕ್ಷಾಂತರ ಮೌಲ್ಯದ ಜೀವವಿಮೆ ಪಾಲಿಸಿ ಕೂಡ ಮಾಡುವದರೊಂದಿಗೆ ಸ್ಥಳೀಯ ಬ್ಯಾಂಕ್ ಒಂದರಲ್ಲಿ ಭಾರೀ ಮೊತ್ತದ ನಿರಖು ಠೇವಣಿ ಕೂಡ ಜಮಾ ಮಾಡಿರುವ ಅಂಶಗಳ ಬಗ್ಗೆ ಮೃತ ವೈದ್ಯರ ಸಹೋದರರಾದ ಪೂರ್ಣೇಶ್ ಶಕ್ತಿಗೆ ತಿಳಿಸಿದ್ದಾರೆ.
ಇದರೊಂದಿಗೆ ತನ್ನ ಮನೆಯ ಹಿಂಭಾಗದಲ್ಲಿ ಕೋಟ್ಯಾಂತರ ರೂ. ಬೆಲೆಬಾಳುವ ನಿವೇಶನವನ್ನು ಕೂಡ ಖರೀದಿ ಮಾಡಿದ್ದು ಈ ಬಗ್ಗೆ ವ್ಯಾಜ್ಯ ಕೂಡ ನ್ಯಾಯಾಲಯದಲ್ಲಿ ವೈದ್ಯರ ಪರವಾಗಿ ತೀರ್ಪು ಇತ್ತೀಚೆಗೆ ಹೊರಬಿದ್ದಿದೆ ಎನ್ನುವ ಮಾಹಿತಿ ಖಚಿತಗೊಂಡಿದೆ. ಕಳೆದ ಹಲವು ವರ್ಷಗಳ ಹಿಂದೆ ಕುಶಾಲನಗರದಲ್ಲಿ ಹಣಕಾಸು ಸಂಸ್ಥೆಯೊಂದರಲ್ಲಿ ಡಾ. ದಿಲೀಪ್ 5 ಲಕ್ಷ ರೂ.ಗಳ ಹಣ ಹೂಡಿ ಇದನ್ನು ಕೂಡ ಸಂಸ್ಥೆಯ ವ್ಯಕ್ತಿಯೊಬ್ಬ ಹಿಂತಿರುಗಿಸದೆ ವಂಚನೆ ಮಾಡಿರುವ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಕೂಡ ನಡೆಯುತ್ತಿದೆ. ಅಲ್ಲದೆ ವೈದ್ಯರು ತಮ್ಮ ಆಪ್ತರೊಂದಿಗೆ ಲಕ್ಷಾಂತರ ರೂ. ಮೊತ್ತದ ನಗದು ಲೇವಾದೇವಿ ವ್ಯವಹಾರ ಮಾಡಿರುವ ಬಗ್ಗೆ ಕೂಡ ಮಾಹಿತಿಗಳು ಕೂಡ ಹೊರಬಿದ್ದಿದೆ.
ಇವೆಲ್ಲಾ ಲೇವಾದೇವಿಗಳೇ ಇವರ ಅಂತ್ಯಕ್ಕೆ ಕಾರಣವಾಗಿರಬಹುದು ಎನ್ನುವ ಚರ್ಚೆಗಳು ಎಲ್ಲೆಡೆ ನಡೆಯುತ್ತಿದ್ದು, ಒಂದೆಡೆಯಾದರೆ ಜಾಗದ ತಕರಾರು ಈ ಪ್ರಕರಣಕ್ಕೆ ಪೂರಕವಾಗಿ ಪೊಲೀಸರು ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ. ಭೂಮಾಫಿಯಾ ಕೂಡ ಇಲ್ಲಿ ತನ್ನ ಕರಾಳ ಹಸ್ತ ಚಾಚಿರುವ ಸಾಧ್ಯತೆ ಕೂಡ ಅಲ್ಲಗೆಳೆಯುವಂತಿಲ್ಲ ಎನ್ನುತ್ತಾರೆ ಸ್ಥಳೀಯರು.
ಅಂದಾಜು 30 ವರ್ಷಗಳ ಹಿಂದೆ ಡಾ.ದಿಲೀಪ್ ವಿವಾಹವಾಗಿದ್ದರೂ ಪ್ರಾರಂಭದಲ್ಲಿಯೇ ದಾಂಪತ್ಯ ಜೀವನ ಸರಿಬರದೆ ಕೆಲವೇ ಅವಧಿಯಲ್ಲಿ ಪತ್ನಿ ಯಿಂದ ದೂರಗೊಂಡು ಒಂಟಿಯಾಗಿ ದಿನದೂಡುತ್ತಿದ್ದುದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಿರಿಯಾಪಟ್ಟಣ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್‍ಕುಮಾರ್ ನೇತೃತ್ವದಲ್ಲಿ ಮೂರು ತಂಡಗಳಿಂದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಪತ್ತೆಹಚ್ಚಲು ಹಲವು ಆಯಾಮಗಳಲ್ಲಿ ಕಾರ್ಯಾ ಚರಣೆ ನಡೆಯುತ್ತಿದೆ. ಕೊಡಗು ಜಿಲ್ಲಾ ಪೊಲೀಸರ ಸಹಕಾರವನ್ನು ಕೋರಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಶಕ್ತಿ ಸಂಪರ್ಕಿಸಿದ ಸಂದರ್ಭ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ವೈದ್ಯ ದಿಲೀಪ್ ಅವರ ಹೆಚ್ಚಿನ ವಹಿವಾಟುಗಳು ಕೊಡಗು ಜಿಲ್ಲೆಯಲ್ಲಿ ಸಂದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಕೂಡ ಈ ಪ್ರಕರಣದ ಬಗ್ಗೆ ನಿಗಾವಹಿಸಿ ತಕ್ಷಣ ಆರೋಪಿಗಳ ಪತ್ತೆಗೆ ಸಹಕರಿಸುವದು ಒಳಿತು ಎನ್ನುವದು ಈ ಭಾಗದ ನಾಗರಿಕರ ಅಭಿಪ್ರಾಯವಾಗಿದೆ. ಕುಶಾಲನಗರ ಡಿವೈಎಸ್ಪಿ ಮುರಳೀಧರ್ ಅವರು ಕೂಡ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಲು ತಮ್ಮ ತಂಡಕ್ಕೆ ಮೌಖಿಕ ವಾಗಿ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಸ್ಥಳೀಯ ಪೊಲೀಸರ ತಂಡ ವೈದ್ಯರಿಗೆ ಸಂಬಂಧಿಸಿದಂತೆ ಹಲವು ಮಾಹಿತಿ ಸಂಗ್ರಹಿಸಿದೆ.