ಕೂಡಿಗೆ, ಡಿ. 18: ಜಿಲ್ಲಾ ಭಾರತ್ ಸೇವಾದಳ, ಸಾರ್ವಜನಿಕರ ಶಿಕ್ಷಣ ಇಲಾಖೆ, ತಾಲೂಕು ಭಾರತ್ ಸೇವಾದಳ ಸಮಿತಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮಿತಿ ಹಾಗೂ ಕೂಡಿಗೆ ಮೊರಾರ್ಜಿ ವಸತಿ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಭಾರತ್ ಸೇವಾದಳ ಸ್ವಯಂಸೇವಕಿಯ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಭಾವೈಕ್ಯತಾ ನಾಯಕತ್ವ ಶಿಬಿರ ಕೂಡಿಗೆಯ ಮೊರಾರ್ಜಿ ಆಂಗ್ಲ ಮಾಧ್ಯಮ ಸಭಾಂಗಣದಲ್ಲಿ ನಡೆಯಿತು.

ಶಿಬಿರದ ಸಮಾರೋಪ ಸಮಾರಂಭದ ಉದ್ಘಾಟಿಸಿದ ಭಾರತ್ ಸೇವಾ ದಳದ ಜಿಲ್ಲಾ ಕಾರ್ಯದರ್ಶಿ ಮೋಂತಿ ಗಣೇಶ್ ಮಾತನಾಡಿ, ವಿದ್ಯಾರ್ಥಿಗಳು ಸ್ವಚ್ಛತಾ ಮನೋಭಾವ ಬೆಳೆಸಿಕೊಳ್ಳುವದರ ಜೊತೆಗೆ ಉತ್ತಮ ಪ್ರಜೆಯಾಗಿ ಬೆಳೆಯಲು ಸೇವಾದಳದಂತಹ ಸಂಸ್ಥೆಗಳ ಮೂಲಕ ಶಿಸ್ತನ್ನು ಕಲಿಯುವದರ ಜೊತೆಗೆ ಶಿಸ್ತನ್ನು ಅಳವಡಿಸಿಕೊಳ್ಳಲು ಸಹಕಾರಿಯಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಾರತ್ ಸೇವಾದಳ ಕೇಂದ್ರ ಸಮಿತಿಯ ಸದಸ್ಯ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತುಬದ್ಧತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಸೇವಾ ಶಿಬಿರಗಳು ಅನುಕೂಲವಾಗುತ್ತವೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ, ಡಯಟಿನ ಪ್ರಾಧ್ಯಾಪಕ ಸುರೇಶ್ ಮಾತನಾಡಿದರು. ವೇದಿಕೆಯಲ್ಲಿ ಮೊರಾರ್ಜಿ ಶಾಲೆಯ ಪ್ರಾಂಶುಪಾಲ ಕೆ.ಎ. ಪ್ರಕಾಶ್, ಭಾರತ್ ಸೇವಾದಳದ ವೀರಾಜಪೇಟೆ ತಾಲೂಕು ಕಾರ್ಯದರ್ಶಿ ಪ್ರವೀಣ್, ತಾಲೂಕು ಕಾರ್ಯದರ್ಶಿ ಕರುಂಬಯ್ಯ, ದೈಹಿಕ ಶಿಕ್ಷಕರುಗಳಾದ ಗಣೇಶ್, ಭೋಜೇಗೌಡ, ನಂದ, ದಿನೇಶ್ ಆಚಾರಿ ಸೇರಿದಂತೆ ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು ಭಾಗವಹಿಸಿದ್ದರು.