ವೀರಾಜಪೇಟೆ, ಡಿ. 19: ಜಿಲ್ಲೆ ಯಲ್ಲಿರುವ ಯರವ ಸಮುದಾಯಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗೋಣಿಕೊಪ್ಪಲಿನಲ್ಲಿ ಯರವ ಯುವ ಜನಜಾಗೃತಿ ಪ್ರತಿಭಟನಾ ಮೆರವಣಿಗೆ ನಡೆಯಿತು

ಒಕ್ಕೂಟದ ಗೌರವ ಅಧ್ಯಕ್ಷ ಪಿ.ಎಸ್. ಮುತ್ತ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಆದಿವಾಸಿಗಳ ಬದುಕು ಅತಂತ್ರವಾಗಿದೆ. ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತ್ಯೇಕ ಪ್ಯಾಕೇಜ್ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಜಿಲ್ಲೆಯಲ್ಲಿರುವ ಬುಡಕಟ್ಟು ಸಮುದಾಯದ ಯರವ, ಪಂಜರಿ, ಪಣಿಯರ, ಜೇನುಕುರುಬ ಸೇರಿದಂತೆ ಇತರ ಸಮುದಾಯದ ಮಂದಿ ಸಂಕಷ್ಟದ ಜೀವನ ನಡೆಸುತ್ತಿದ್ದು, ಇಂದಿಗೂ ಮೂಲ ಸೌಕರ್ಯ ವಂಚಿತರಾಗಿ ಬದುಕು ಸಾಗಿಸುತ್ತಿದ್ದಾರೆ.

ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಸಮುದಾಯದವರನ್ನು ರಾಷ್ಟ್ರೀಯ ವನ್ಯಜೀವಿ ತಾಣ ಎಂದು ಘೋಷಣೆ ಮಾಡಿ ಬಲವಂತವಾಗಿ ಮೂಲ ನೆಲದಿಂದ ಒಕ್ಕಲೆಬ್ಬಿಸುವ ಮೂಲಕ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಬುಡಕಟ್ಟು ಸಮುದಾಯದ ವರನ್ನು ಬೇರೆ ಜಿಲ್ಲೆಗಳಿಗೆ ಸ್ಥಳಾಂತರ ಮಾಡುತ್ತಿರುವ ಕ್ರಮ ಖಂಡನೀಯ. ಅರಣ್ಯ ಸಂಪತ್ತು, ಪ್ರಕೃತಿಯನ್ನು ಉಳಿಸಿಕೊಂಡು ತಮ್ಮದೇ ಆದ ಬದುಕಿನಲ್ಲಿ ಜೀವನ ನಡೆಸುತ್ತಿದ್ದ ಸಮುದಾಯದವರಿಗೆ 5 ಎಕರೆ ಕೃಷಿ ಭೂಮಿಯೊಂದಿಗೆ ಮೂಲ ಸೌಕರ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ಗೋಣಿಗೊಪ್ಪ ಉಮಾಮಹೇಶ್ವರಿ ದೇವಸ್ಥಾನದ ಬಳಿಯಿಂದ ಆರ್.ಎಂ.ಸಿ. ಮೈದಾನದವರೆಗೆ ಮೆರವಣಿಗೆ ನಡೆಸಿ ನಂತರ ವೃತ್ತ ನಿರೀಕ್ಷರ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಬೇಡಿಕೆಗಳು: ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವ ಯರವ ಸಮುದಾಯಕ್ಕೆ ಪ್ರತ್ಯೇಕ ಪ್ಯಾಕೇಜ್ ಬಿಡುಗಡೆ ಮಾಡಬೇಕು. ಬುಡಕಟ್ಟು ಸಮುದಾಯಕ್ಕೆ ಭೂಮಿ ಹಂಚಿಕೆ ಮಾಡಲು ಪ್ರತ್ಯೇಕ ಸಚಿವ ಸಂಪುಟ ಸಭೆಯನ್ನು ಜಿಲ್ಲೆಯಲ್ಲೇ ಕರೆಯಬೇಕು. ಜಿಲ್ಲೆಯಲ್ಲಿರುವ ಸರಕಾರಿ ಜಮೀನನ್ನು ನಿವೇಶನ ರಹಿತರಿಗೆ ಹಂಚಬೇಕು. ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿಸಬೇಕು. ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಸಮಿತಿ ಮತ್ತು ಅರಣ್ಯ ಹಕ್ಕು ಸಮಿತಿಯ ಉಪಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಗಳನ್ನು ರಚಿಸಬೇಕು. ಉತ್ತಮ ಗುಣಮಟ್ಟದ ದಿನಸಿ ಸಾಮಗ್ರಿಗಳನ್ನು ಯರವ ಸಮುದಾಯಕ್ಕೆ ನೀಡಬೇಕು. ಆದಿವಾಸಿ ಸಮುದಾಯದ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ದೊರಕಿಸಿ ಕೊಡಬೇಕು. ಸರಕಾರ ಜಾರಿಗೆ ತಂದಿರುವ ಪಿಂಚಣಿ ಯೋಜನೆ ಸೇರಿದಂತೆ ಇತರ ಎಲ್ಲಾ ಸೌಲಭ್ಯಗಳನ್ನು ಆದಿವಾಸಿಗಳಿಗೆ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಪ್ರಮುಖರಾದ ಸಣ್ಣಪ್ಪ, ವಿಜಯ, ಗಣೀಶ್, ಶಂಕರ, ರಾಜು, ಅಯ್ಯಪ್ಪ, ಕರಿಯ, ರಮೇಶ್, ರಾಜ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಹಾಡಿಯ ಪ್ರಮುಖರು ಭಾಗವಹಿಸಿದ್ದರು.

- ರಂಜಿತಾ