ಮಡಿಕೇರಿ, ಡಿ. 18: 2019ರ ನೂತನ ವರ್ಷಾರಂಭದಿಂದ ಕೇಬಲ್ ಮತ್ತು ಡಿಟಿಎಚ್‍ನ ಮಾಸಿಕ ದರದಲ್ಲಿ ಬದಲಾವಣೆಯಾಗಲಿದೆ. ಈ ಕುರಿತಂತೆ ಕೇಂದ್ರ ಸರಕಾರ ಹೊಸ ನೀತಿ ಜಾರಿಗೆ ಮುಂದಾಗಿದೆ. ಈ ನಿಯಮ ಜಾರಿಯ ಮೂಲಕ ಚಾನಲ್‍ಗಳ ಆಯ್ಕೆಯ ವಿಚಾರದಲ್ಲಿ ಅನಗತ್ಯ ಕಿರಿ ಕಿರಿ ತಪ್ಪಿಸಿ ಆಯ್ಕೆಯಲ್ಲಿ ಗ್ರಾಹಕರಿಗೆ ಅವರ ಆಸಕ್ತಿಗೆ ತಕ್ಕಂತೆ ದರ ನಿಗದಿಪಡಿಸಲು ಸಿದ್ಧತೆ ನಡೆದಿದೆ. ಆದರೆ ಗ್ರಾಹಕರಿಗೆ ಅವರು ನೀಡುವ ಹಣಕ್ಕೆ ತಕ್ಕಂತೆ ಮಾತ್ರ ಈ ಅವಕಾಶ ಬಳಸಿಕೊಳ್ಳಬಹುದಾಗಿದ್ದು, ಪ್ರಸ್ತುತದ ಸನ್ನಿವೇಶದ ಜನತೆಯ ಅಭಿರುಚಿಗೆ ಹೊಸ ನೀತಿಯಿಂದಾಗಿ ಹೊರೆ ಬೀಳಲಿರುವದಂತೂ ಖಚಿತವೆನ್ನಲಾಗುತ್ತಿದೆ.
ಗ್ರಾಹಕರು ಎಷ್ಟು ಚಾನಲ್‍ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಅದಕ್ಕೆ ಅನುಗುಣವಾಗಿ ನಿಗದಿಪಡಿಸಿರುವ ದರವನ್ನು ಪಾವತಿಸಬೇಕಾಗುತ್ತದೆ. ಡಿ. 29ಕ್ಕೆ ಹಳೆಯ ದರ ಅಂತ್ಯವಾಗಲಿದ್ದು, ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಜ. 1 ರಿಂದ ಜಾರಿಗೆ ಬರುವಂತೆ ದೇಶಾದ್ಯಂತ ಕೇಬಲ್ ಹಾಗೂ ಡಿಟಿಎಚ್ ಈ ಎರಡಕ್ಕೂ ಹೊಸ ದರವನ್ನು ನಿಗದಿ ಮಾಡಿದೆ.
ಗ್ರಾಹಕರಿಗೆ ಅನಗತ್ಯವಾಗಿ ಹೆಚ್ಚು ಚಾನಲ್‍ಗಳನ್ನು ನೀಡುವದನ್ನು ತಪ್ಪಿಸಲು ಹಾಗೂ ಅಂತಿಮವಾಗಿ ಅವರ ಅಭಿರುಚಿಗೆ ತಕ್ಕಂತೆ ಅವರ ಇಷ್ಟದ ವಾಹಿನಿ ನೋಡುವ ಅವಕಾಶ ಮಾಡಿಕೊಡುವ ಉದ್ದೇಶ ಇದು ಎನ್ನಲಾಗಿದೆ. ಇದರಿಂದ ಸಹಜವಾಗಿಯೇ ಗ್ರಾಹಕರಿಗೆ ಅವರು ಪ್ರಸ್ತುತ ನೀಡುತ್ತಿರುವ ದರ ಹೆಚ್ಚೂ ಆಗಬಹುದು ಅಥವಾ ಕಡಿಮೆಯೂ ಆಗಬಹುದು. ಈಗ 300 ರಿಂದ 350 ರೂ. ಗಳಿಗೆ ಕೇಬಲ್ ಆಪರೇಟರ್‍ಗಳು ಸುಮಾರು 400 ಚಾನಲ್‍ಗಳನ್ನು ಒದಗಿಸುತ್ತಿ ದ್ದಾರೆ. ಈ ರೀತಿ ಎಲ್ಲಾ ಚಾನಲ್‍ಗಳು ಬೇಕಾದರೆ ಈಗಿನ ದರ ಬಹುತೇಕ ಮೂರು ಪಟ್ಟು ಹೆಚ್ಚಾಗಲಿದೆ ಎಂಬದು ಮಡಿಕೇರಿಯ ಕೇಬಲ್ ಉದ್ಯಮಿ ತಮ್ಮುಪೂವಯ್ಯ ಅವರ ಅಭಿಪ್ರಾಯ ಏಕೆಂದರೆ ಹೊಸ ನೀತಿಯಂತೆ ಕನಿಷ್ಟ ದರ ರೂ. 130 ಹಾಗೂ ಇದಕ್ಕೆ ಶೇಕಡ 18 ರಷ್ಟು ತೆರಿಗೆ ಬೀಳುತ್ತದೆ.
(ಮೊದಲ ಪುಟದಿಂದ) ಈ ದರದಲ್ಲಿ ದೂರದರ್ಶನದ ವಾಹಿನಿಗಳು, ನ್ಯೂಸ್ ಚಾನಲ್‍ಗಳು ಮಾತ್ರ ಲಭ್ಯವಾಗಲಿವೆ. ಉಳಿದಂತೆ ಕನ್ನಡದ ಇತರ ವಾಹಿನಿಗಳಾಗಲಿ, ತಮಿಳು, ತೆಲುಗು, ಹಿಂದಿ, ಕ್ರೀಡಾ ಚಾನಲ್‍ಗಳು ಬೇಕಾದಲ್ಲಿ ಆಯಾ ಚಾನಲ್‍ಗಳಿಗೆ ಹೆಚ್ಚುವರಿ ವೆಚ್ಚವನ್ನು ಗ್ರಾಹಕರು ಭರಿಸಬೇಕಾಗುತ್ತದೆ ಎನ್ನುವದು ಕೇಬಲ್ ಆಪರೇಟರ್‍ಗಳ ಅಭಿಪ್ರಾಯ.
ಗ್ರಾಹಕರಿಗೆ ಇಂತಹ ಎಲ್ಲಾ ಚಾನಲ್‍ಗಳು ಬೇಕಾದಲ್ಲಿ ಈಗ ಪಾವತಿಸುತ್ತಿರುವ ದರಕ್ಕಿಂತ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಇಲ್ಲವಾದಲ್ಲಿ ಕೇವಲ ಕನ್ನಡ ಹಾಗೂ ಪ್ರೀ ಟು ಏರ್ ಚಾನಲ್ ಮಾತ್ರ ಸಾಕೆಂದರೆ ಪ್ರಸ್ತುತ ನೀಡುತ್ತಿರುವ ದರದಲ್ಲಿಯೇ 20 ರಿಂದ 30 ರೂ.ಗಳಷ್ಟು ಕಡಿಮೆಯಾಗಬಹುದು ಎಂಬದು ಕೇಬಲ್ ಉದ್ಯಮದವರ ಅನಿಸಿಕೆ. ಈಗಿನ ವಾಸ್ತವಕ್ಕೆ ಬಂದರೆ ಎಲ್ಲರಿಗೂ ಬೇರೆ ಬೇರೆ ರೀತಿಯ ಚಾನಲ್‍ಗಳು, ವಿವಿಧ ಕ್ರೀಡಾ ಚಾನಲ್‍ಗಳು ಬೇಕೇ ಬೇಕು ಆದರೆ ಪ್ರತಿ ಚಾನಲ್‍ಗೆ ನಿಗದಿತ ದರ ಪಾವತಿಸುವದು ಅನಿವಾರ್ಯ ವಾಗಲಿದೆ.
ಹೊಸ ಲೆಕ್ಕಾಚಾರ ಹೀಗಿದೆ
ಮೂಲ ದರ ರೂ. 130 + ಶೇ. 18 ಜಿಎಸ್‍ಟಿ + ಬೇಸಿಕ್ ಪ್ಯಾಕ್ ರೂ. 91 + ನೆಟ್‍ವರ್ಕ್ ಕೆಪಾಸಿಟಿ ಫೀ - 20 ರೂ. ಒಟ್ಟು ಮೊತ್ತ 280 ರಿಂದ 300 ರೂ. ಕೇಂದ್ರ ಸರಕಾರ ಎರಡು ವರ್ಷಗಳ ಹಿಂದೆ ನೋಟ್‍ಬ್ಯಾನ್ ಮಾಡಿದಂತೆ ಈಗ ಕೇಬಲ್ ನಿಯಂತ್ರಣಕ್ಕೆ ಮುಂದಾಗಿದೆ. ಗ್ರಾಹಕರ ಹಿತರಕ್ಷಣೆ ಹೆಸರಿನಲ್ಲಿ ಕಾರ್ಪೋರೇಟ್‍ಗೆ ಮಣೆ ಹಾಕಲು ದರವನ್ನು ಈ ರೀತಿ ಹೆಚ್ಚಳ ಮಾಡಲಾಗುತ್ತಿದ್ದು, ಇದು ಗ್ರಾಹಕರಿಗೆ ಹೊರೆಯೇ ಆಗಲಿದೆ ಎಂದು ಹೊಸ ನಿಯಮದ ಬಗ್ಗೆ ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್ ಅಸೋಸಿ ಯೇಷನ್‍ನ ಅಧ್ಯಕ್ಷ ಎಸ್. ಪ್ಯಾಟ್ರಿಕ್ ರಾಜು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊಸ ನೀತಿಯ ಬಗ್ಗೆ ದೇಶಾದ್ಯಂತ ಕೇಬಲ್ ಆಪರೇಟರ್‍ಗಳಿಂದ ಆಕ್ಷೇಪಗಳು ವ್ಯಕ್ತಗೊಳ್ಳುತ್ತಿದ್ದು, ಅಲ್ಲಲ್ಲಿ ಪ್ರತಿಭಟನೆಗಳು ಆರಂಭಗೊಂಡಿವೆ.