ಮಡಿಕೇರಿ,ಡಿ.18: ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಕೊಡಗು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಸಮಿತಿ, ಕೊಡಗು ಪ್ರೆಸ್ಕ್ಲಬ್, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಮೈಸೂರು ಜೆಎಸ್ಎಸ್ಕಾಲೇಜು ಸಹಯೋಗ ದಲ್ಲಿ ಜ. 19 ರಂದು ಪತ್ರಕರ್ತರಿಗೆ ಹಾಗೂ ಪತ್ರಕರ್ತರ ಕುಟುಂಬಸ್ಥರಿಗೆ ಉಚಿತ ಆರೋಗ್ಯ ಶಿಬಿರವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾ ಭವನದಲ್ಲಿ ನಡೆದ ಕೊಡಗು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸಮಿತಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಜ. 19 ರಂದು ನಗರದ ಬಾಲಭವನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯ ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಜನರಲ್ ಫಿಸಿಷನ್, ಇಎನ್ಟಿ ಹಾಗೂ ಇಸಿಜಿ ತಜ್ಞ ವೈದ್ಯರ ತಂಡ ಪಾಲ್ಗೊಳ್ಳಲಿದ್ದು, ಶಿಬಿರದ ಸದುಪಯೋಗವನ್ನು ಕೊಡಗು ಜಿಲ್ಲೆಯ ಪತ್ರಕರ್ತರು ಹಾಗೂ ಪತ್ರಕರ್ತರ ಕುಟುಂಬಸ್ಥರು ಪಡೆದುಕೊಳ್ಳಬಹುದು.
ಬಾಲಭವನ ಮಕ್ಕಳಿಗೆ ತಪಾಸಣೆ: ಕಾರ್ಯಕ್ರಮದಲ್ಲಿ ಬಾಲಭವನದಲ್ಲಿ ಆಶ್ರಯ ಪಡೆದಿರುವ ಸುಮಾರು 27ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಕೊಡಗು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸಮಿತಿ ನಿರ್ಧರಿಸಲಾಗಿದೆ.
ವಿವಿಧ ಕಾರ್ಯಕ್ರಮಕ್ಕೆ ಚಿಂತನೆ: ಪತ್ರಕರ್ತರ ಕ್ಷೇಮಾಭಿವೃದ್ದಿ ನಿಧಿ ಸಮಿತಿ ವತಿಯಿಂದ ಜಿಲ್ಲೆಯ ಪತ್ರಕರ್ತರಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಸಭೆಯಲ್ಲಿ ಚರ್ಚಿಸಲಾಯಿತು. ಪತ್ರಕರ್ತರಿಗೆ ಜೀವ ವಿಮೆ, ವಾಹನ ಚಾಲನಾ ಪರವಾನಿಗೆ, ಪಾಸ್ಪೋರ್ಟ್, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಸರ್ಕಾರದಿಂದ ಕೊಡಮಾಡುವ ಜೀವನ ಭತ್ಯೆಯನ್ನು ಗುಂಪಾಗಿ ಮಾಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಧಿಕಾರ ಹಸ್ತಾಂತರ
ಕೊಡಗು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸಮಿತಿಯ 2018-23ನೇ ಸಾಲಿನ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಪತ್ರಿಕಾ ಭವನದಲ್ಲಿ ನಡೆಯಿತು.ಸಮಿತಿಯ ಮಾಜಿ ಅಧ್ಯಕ್ಷ ಶ್ರೀನಿವಾಸ್ ಚಂಗಪ್ಪ ಅವರು ನೂತನ ಅಧ್ಯಕ್ಷ ಎಸ್.ಮಹೇಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವೀತಾ ರೈ, ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ಖಜಾಂಚಿ ಅರುಣ್ ಕೂರ್ಗ್, ರಾಜ್ಯ ಸಮಿತಿ ಸದಸ್ಯರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕ್ಷೇಮಾಭಿವೃದ್ಧಿ ನಿಧಿ ಸಮಿತಿಯ ಕಾರ್ಯದರ್ಶಿ ಎಂ.ಎನ್.ನಾಸೀರ್, ಸದಸ್ಯರಾದ ಕುಪ್ಪಂಡ ದತ್ತಾತ್ರಿ, ಟಿ.ಕೆ. ಸಂತೋಷ್ ಹಾಜರಿದ್ದರು.