ಸೋಮವಾರಪೇಟೆ, ಡಿ. 18: ಸಿದ್ಧಗಂಗಾ ಶ್ರೀಗಳಾದ ಶಿವಕುಮಾರ ಸ್ವಾಮೀಜಿ ಅವರ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮನಿಶ್ ಮಣಿಕಂಠ ಹೆಸರಿನಲ್ಲಿ ಖಾತೆ ಹೊಂದಿರುವ ಬೆಟ್ಟದಳ್ಳಿ ಗ್ರಾಮದ ಬಿ.ಯು. ಪ್ರಸನ್ನ ಎಂಬವರು ಪತ್ರಿಕಾ ಗೋಷ್ಠಿಯಲ್ಲಿ ಕ್ಷಮೆಯಾಚಿಸಿದ್ದಾರೆ.

ಇಲ್ಲಿನ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಸನ್ನ ಅವರು, ತಾನು ಮಡಿಕೇರಿ ಘಟಕದ ಕೆಎಸ್‍ಆರ್‍ಟಿಸಿಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸೋಮವಾರಪೇಟೆ ಬಸ್‍ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತನ್ನ ಮೊಬೈಲ್‍ನ್ನು ಚಾರ್ಜ್‍ಗೆ ಇಟ್ಟು ಹೊರ ತೆರಳಿದ್ದ ಸಂದರ್ಭ ಯಾರೋ ಕಿಡಿಗೇಡಿಗಳು ತನ್ನ ಫೇಸ್‍ಬುಕ್‍ನಿಂದ ಶ್ರೀಗಳ ವಿರುದ್ಧ ಅವಹೇಳನಕಾರಿ ಸಂದೇಶ ಹಾಕಿದ್ದಾರೆ ಎಂದರು.

ಈ ಬಗ್ಗೆ ಎರಡು ದಿನಗಳ ನಂತರವಷ್ಟೇ ತನಗೆ ತಿಳಿದು ಬಂದಿದ್ದು, ತಕ್ಷಣ ಪೋಸ್ಟ್‍ನ್ನು ಡಿಲೀಟ್ ಮಾಡಿದ್ದೇನೆ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಬಗ್ಗೆ ತನಗೆ ಅಪಾರ ಗೌರವವಿದ್ದು, ತಾನೂ ಸಹ ಅವರ ಭಕ್ತನಾಗಿದ್ದೇನೆ. ನಡೆದಾಡುವ ದೇವರೆಂದೇ ಖ್ಯಾತರಾಗಿರುವ ಸ್ವಾಮೀಜಿಗಳು ಅಸಂಖ್ಯಾತ ಮಕ್ಕಳಿಗೆ ಅನ್ನ, ವಿದ್ಯಾದಾನ ಮಾಡುತ್ತಿದ್ದಾರೆ. ಫೇಸ್‍ಬುಕ್‍ನ ಪೋಸ್ಟ್‍ನಿಂದ ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆಯಾಚಿಸುವದಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಸನ್ನ ಕೈಮುಗಿದರು.

ಗೋಷ್ಠಿಯಲ್ಲಿ ದಲಿತ ಸಂಘಟನೆಯ ಹೊನ್ನಪ್ಪ, ಬಿ.ಆರ್. ಉತ್ತಯ್ಯ, ಎಸ್.ಆರ್. ಬಸವರಾಜು ಅವರುಗಳು ಉಪಸ್ಥಿತರಿದ್ದರು.