ಕುಶಾಲನಗರ, ಡಿ. 18: ವಿದ್ಯಾರ್ಥಿಗಳು ತಮಗೆ ದೊರಕುವ ಸೌಲಭ್ಯಗಳನ್ನು ದುರ್ಬಳಕೆ ಮಾಡದೆ ಸದುಪಯೋಗಪಡಿಸಿಕೊಂಡು ಉನ್ನತಿ ಸಾಧಿಸಬೇಕಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ಸಮಿತಿ ಜಿಲ್ಲಾ ಸದಸ್ಯ ಎಂ.ಎನ್. ಚಂದ್ರಮೋಹನ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಶಾಲನಗರ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸ್ಥಳೀಯ ವಿವೇಕಾನಂದ ಪಿ.ಯು. ಕಾಲೇಜಿನಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು. ತಂತ್ರಜ್ಞಾನ ಯುಗದಲ್ಲಿ ಪ್ರಪಂಚದ ಮಾಹಿತಿಗಳು ಬೆರಳ ತುದಿಯಲ್ಲಿ ಲಭಿಸುತ್ತಿದ್ದು ಇವುಗಳ ಸದ್ಬಳಕೆಯಾಗ ಬೇಕಿದೆ. ಶಿಕ್ಷಣ, ಮಾನಸಿಕ ಹಾಗೂ ದೈಹಿಕ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳನ್ನು ಹೊರತುಪಡಿಸಿ ಸಮಾಜದ ಸ್ವಾಸ್ಥ್ಯ ಕದಡುವ ವಿಚಾರಗಳಿಗೆ ವಿದ್ಯಾರ್ಥಿಗಳು ಮುಂದಾಗಬಾರದು ಎಂದರು. ತಮ್ಮ ಆರೋಗ್ಯ ಕಾಪಾಡಿ ಕೊಳ್ಳುವದರೊಂದಿಗೆ ಸಮಾಜದ ಸ್ವಾಸ್ಥ್ಯ ವೃದ್ಧಿಸುವಲ್ಲಿ ಕಾರ್ಯೋನ್ಮುಖ ರಾಗಬೇಕಿದೆ ಎಂದು ತಿಳಿಸಿದರು. ಕಾಲೇಜು ಪ್ರಾಂಶುಪಾಲ ನಾಗೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಚಾರಿ ಪೊಲೀಸ್ ಠಾಣೆ ಮುಖ್ಯಪೇದೆ ಹೆಚ್.ಎಸ್. ರವಿ ಸಂಚಾರಿ ನಿಯಮಗಳು ಬಗ್ಗೆ ಮಾಹಿತಿ ಒದಗಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಉದ್ದೇಶ, ಪ್ರಯೋಜನೆಗಳ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಕಲಾವತಿ, ಕುಶಾಲನಗರ ವಲಯ ಮೇಲ್ವಿಚಾರಕ ಹರೀಶ್ ಇದ್ದರು. ವಿದ್ಯಾರ್ಥಿನಿ ಶ್ರೇಯಾ ತಂಡ ಪ್ರಾರ್ಥಿಸಿತು, ಸೇವಾ ಪ್ರತಿನಿಧಿ ಜಯಲಕ್ಷ್ಮಿ ಸ್ವಾಗತಿಸಿದರೆ, ಯಶೋಧ ವಂದಿಸಿದರು.