ಮಡಿಕೇರಿ, ಡಿ.18 : ನಗರದ ಖಾಸಗಿ ಹಳೇ ಬಸ್ ನಿಲ್ದಾಣವನ್ನು ಹೊಸ ಖಾಸಗಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸುವ ಬಗ್ಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ನಗರಾಭಿವೃದ್ಧಿ ಯೋಜನಾ ಶಾಖೆಯ ಎಇಇ ಹೇಮಂತ್ ಕುಮಾರ್ ಅವರು ಮಾತನಾಡಿ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗೇರಿರ ಮುತ್ತಣ್ಣ ವೃತ್ತ, ರಾಜಾಸೀಟು ರಸ್ತೆ, ಎಲ್‍ಐಸಿ ಕಚೇರಿ ಮಾರ್ಗವಾಗಿ ಬಸ್‍ಗಳು ಖಾಸಗಿ ಹೊಸ ಬಸ್ ನಿಲ್ದಾಣ ತಲಪಲಿವೆ ಎಂದು ವಿವರಿಸಿದರು. ಹಾಗೆಯೇ ಖಾಸಗಿ ನೂತನ ಬಸ್ ನಿಲ್ದಾಣದಿಂದ ಕೈಗಾರಿಕಾ ಬಡಾವಣೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಅಜ್ಜಮಾಡ ದೇವಯ್ಯ ವೃತ್ತ ಮಾರ್ಗ ಮಂಗೇರಿರ ಮುತ್ತಣ್ಣ ವೃತ್ತ ತಲಪಲಿವೆ. ಈ ಮಾರ್ಗಗಳು ಏಕಮುಖ ಸಂಚಾರಕ್ಕೆ ಅವಕಾಶ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಾತನಾಡಿ ಖಾಸಗಿ ಹೊಸ ಬಸ್ ನಿಲ್ದಾಣ ಉದ್ಘಾಟನೆಯಾಗಿ 9 ತಿಂಗಳಾಗಿದೆ. ಆದರೂ ಇನ್ನೂ ಸ್ಥಳಾಂತರಗೊಂಡಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಖಾಸಗಿ ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಗೊಳ್ಳಬೇಕಿದ್ದು, ಈ ಸಂಬಂಧ ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಈಗಾಗಲೇ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶೌಚಾಲಯ ಮತ್ತಿತರ ಕಾಮಗಾರಿಗಳು ಪೂರ್ಣ ಗೊಂಡಿವೆ. ಆದ್ದರಿಂದ ಹೆಚ್ಚು ದಿನ ಮುಂದೂಡಿಕೊಂಡು ಹೋಗುವದು ಸರಿಯಲ್ಲ. ಎಲ್ಲರ ಹಿತದೃಷ್ಟಿಯಿಂದ ತಕ್ಷಣ ಗಮನಹರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.
ಸಂಚಾರ ಮಾರ್ಗ ಒತ್ತುವರಿ ಯಾಗಿರುವದನ್ನು ಸರ್ವೆ ಮಾಡಿ ಕೂಡಲೇ ತೆರವುಗೊಳಿಸುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು. ಈ ಸಂಬಂಧ ಸ್ಥಳೀಯ ಜನಪ್ರತಿನಿಧಿಗಳು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು. ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವು ಗೊಳಿಸಲಾಗುವದು. ಖಾಸಗಿ ಬಸ್‍ಗಳನ್ನು ಹೊಸ ನಿಲ್ದಾಣಕ್ಕೆ ಸ್ಥಳಾಂತರ ಮಾಡಲು ಸಹಕಾರ ನೀಡಲಾಗುವದು ಎಂದರು.
ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ ಜೋಯಪ್ಪ ಅವರು ರಾಜಾಸೀಟು ಮಾರ್ಗದಲ್ಲಿ ಬಸ್‍ಗಳು ಸಂಚರಿಸು ವದರಿಂದ ಸಂತ ಮೈಕಲರ ಶಾಲೆಯ ವಿದ್ಯಾರ್ಥಿಗಳಿಗೆ ತುಂಬಾ ತೊಂದg Éಯಾಗಲಿದೆ. ಹಾಗೆಯೇ ರಾಜಾಸೀಟಿಗೆ ಆಗಮಿಸುವ ಪ್ರವಾಸಿಗರಿಗೂ ಕಿರಿಕಿರಿ ಉಂಟಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ವೇಳೆಯಲ್ಲಿ ಸಂತ ಮೈಕಲರ ಶಾಲೆಯ
(ಮೊದಲ ಪುಟದಿಂದ) ವಿದ್ಯಾರ್ಥಿಗಳು ಓಡಾಡುತ್ತಾರೆ. ಪ್ರತೀ 3 ನಿಮಿಷಕ್ಕೊಮ್ಮೆ ಬಸ್‍ಗಳು ಸಂಚರಿಸಲಿದ್ದು, ಆದ್ದರಿಂದ ಈ ಬಗ್ಗೆ ಗಮನಹರಿಸಬೇಕಿದೆ ಎಂದು ಗಮನ ಸೆಳೆದರು.
ನಗರಸಭೆ ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಅವರು ಮಂಗೇರಿರ ಮುತ್ತಣ್ಣ ವೃತ್ತದಿಂದ ಹೊಸ ಖಾಸಗಿ ಬಸ್ ನಿಲ್ದಾಣದವರೆಗೆ ಏಕಮುಖ ಸಂಚಾರ ಮಾಡುವದರಿಂದ ಸ್ಥಳೀಯರು ನಗರ ಸುತ್ತಿ ಬಳಸಿ ಕೊಂಡು ಬರಲು ಸಾಧ್ಯವಿಲ್ಲ. ಆದ್ದರಿಂದ ದ್ವಿಮುಖ ಸಂಚಾರ ಇರಬೇಕು ಎಂದು ಅಭಿಪ್ರಾಯಪಟ್ಟರು. ಒತ್ತುವರಿಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಎರಡೂ ಬದಿ ತೆರವುಗೊಳಿಸಬೇಕು. ಅದನ್ನು ಬಿಟ್ಟು ಒಂದು ಕಡೆ ಮಾತ್ರ ತೆರವುಗೊಳಿಸು ವದಕ್ಕೆ ಆಕ್ಷೇಪವಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರು ಏಕಮುಖ ಸಂಚಾರ ಮಾಡಿ ನೋಡೋಣ, ಜನರ ಸ್ಪಂದನೆ ಬಸ್‍ಗಳ ಸಂಚಾರ ಮತ್ತಿತರವನ್ನು ಗಮನಿಸಿ ನಂತರದ ದಿನಗಳಲ್ಲಿ ಬದಲಾವಣೆ ಮಾಡಬಹುದು ಎಂದು ಸಲಹೆಯಿತ್ತರು. ನಿಯಮಾನುಸಾರ ಅನಧೀಕೃತ ಕಟ್ಟಡಗಳನ್ನು ತೆರವುಗೊಳಿಸಲಾಗುವದು, ಸಾರ್ವಜನಿಕರ ಹಿತದೃಷ್ಟಿ ಎಂಬದನ್ನು ಪ್ರತಿಯೊಬ್ಬರೂ ತಿಳಿಯಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಮಂಗೇರಿರ ಮುತ್ತಣ್ಣ ವೃತ್ತದಿಂದ ರಾಜಸೀಟು ಮಾರ್ಗ ಖಾಸಗಿ ಹೊಸ ಬಸ್ ನಿಲ್ದಾಣದವರೆಗೆ ಅಗತ್ಯ ಇರುವ ಕಡೆ ತಡೆಗೋಡೆ ನಿರ್ಮಾಣ ಮಾಡಬೇಕಾಗುತ್ತದೆ ಎಂದು ನಗರಸಭಾ ಉಪಾಧ್ಯಕ್ಷರಾದ ಟಿ.ಎಸ್.ಪ್ರಕಾಶ್ ಸಭೆಯ ಗಮನಕ್ಕೆ ತಂದರು.
ನಗರಸಭೆಯ ಜೂನಿಯರ್ ಎಂಜಿನಿಯರ್ ವನಿತಾ ಅವರು ಖಾಸಗಿ ಹೊಸ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ ಕಾಮಗಾರಿಗಳು ಆಗಿವೆ. ಮಳೆ ನೀರು ತಡೆಯಲು ರೂಫಿಂಗ್ ಕಾಮಗಾರಿ ಕೈಗೊಳ್ಳಬೇಕಿದೆ ಎಂದು ಸಭೆಯ ಗಮನಕ್ಕೆ ತಂದರು. ಸಭೆಯಲ್ಲಿ ನಗರಸಭೆ, ಪೊಲೀಸ್, ಕಂದಾಯ, ಆರ್‍ಟಿಒ, ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳು ಸರ್ವೆ ಮಾಡಿ 3 ದಿನದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. ನಂತರ ಒಂದು ವಾರದೊಳಗೆ ಮತ್ತೊಂದು ಸಭೆ ಆಹ್ವಾನಿಸಲಾಗುವದು ಎಂದು ತಿಳಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನೀಕೃಷ್ಣ, ಖಾಸಗಿ ಬಸ್ ಮಾಲೀಕರ ಸಂಘದ ಕಾರ್ಯದರ್ಶಿ ಜನಾರ್ಧನ ಪ್ರಭು, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಗೋಪಾಲಕೃಷ್ಣ, ಪೌರಾಯುಕ್ತÀ ಎಂ.ಎಲ್.ರಮೇಶ್, ನಾಗರಾಜು, ಶಕ್ತಿ ಬಸ್ ಮಾಲೀಕರು, ನಗರ ಪೊಲೀಸ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ ಇತರರು ಇದ್ದರು.