*ಗೋಣಿಕೊಪ್ಪಲು, ಡಿ. 18 : ಶೌಚಾಲಯಕ್ಕೆ ನೀರು, ತಡೆಗೋಡೆ ನಿರ್ಮಾಣ, ಶಾಲಾ ಕೊಠಡಿಗೆ ಬಣ್ಣ, ಕಂಪ್ಯೂಟರ್ ದುರಸ್ತಿ, ಪ್ರೊಜೆಕ್ಟರ್ ಒದಗಿಸಿ ಕೊಡುವದು ಸೇರಿದಂತೆ ಹಲವು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಮಕ್ಕಳ ಗ್ರಾಮ ಸಭೆಯಲ್ಲಿ ಮುಂದಿಟ್ಟರು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಸರಕಾರಿ ಪ್ರಥಮಿಕ ಶಾಲೆ ಸಭಾಂಗಣದಲ್ಲಿ ವಿದ್ಯಾರ್ಥಿ ಸಾನಿಯ ಅಧ್ಯಕ್ಷತೆಯಲ್ಲಿ ಮಕ್ಕಳ ಗ್ರಾಮಸಭೆ ನಡೆಯಿತು.
ವಿದ್ಯಾರ್ಥಿನಿ ಸಾನಿಯ ಮಾತನಾಡಿ ಶೌಚಾಲಯಗಳಿಗೆ ನೀರಿನ ಸಮಸ್ಯೆ ಕಾಡುತ್ತಿವೆ. ಪಂಚಾಯಿತಿ ವತಿಯಿಂದ ಒದಗಿಸಿ ಕೊಡಿ ಎಂದು ಬೇಡಿಕೆ ಮುಂದಿಟ್ಟರು. ಶಾಲೆ ಬಿಡುವ ಸಂದರ್ಭದಲ್ಲಿ ವಾಹನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಬೇಕೆಂದು ಮನವಿ ಮಾಡಿದರು.
ಅಕ್ಷರ ದಾಸೋಹ ಕೊಠಡಿಗೆ ಗಾರೆ ಹಾಕಿಕೊಡುವಂತೆ ಸಭೆಯ ಗಮನಕ್ಕೆ ತಂದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಮಕ್ಕಳು ತಮ್ಮ ಸಮಸ್ಯೆಗಳನ್ನು ಯಾವದೇ ಭಯವಿಲ್ಲದೆ
ಮುಂದಿಟ್ಟು, ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಿರುವದು ಶ್ಲಾಘನೀಯ.
ಇವರ ಮನವಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇವೆ ಎಂದು ಭರವಸೆ ನೀಡಿದರು. ಮುಖ್ಯ ಶಿಕ್ಷಕಿ ಶಶಿಕಲಾ ಮಾತನಾಡಿ ಶಾಲೆ ಬಿಟ್ಟ ಮಕ್ಕಳ ಸಮಸ್ಯೆ ಕಾಡುತ್ತಿದೆ. ಇದು ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ತಮ್ಮ ಮಕ್ಕಳು
ಶಾಲೆಗೆ ಗೈರು ಹಾಜರಾಗದಂತೆ ಪೋಷಕರು ಗಮನಹರಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಕೊಣಿಯಂಡ ಬೋಜಮ್ಮ ವಿದ್ಯಾರ್ಥಿಗಳು ನೀರನ್ನು ಮಿತವಾಗಿ ಬಳಸಲು ಶಿಕ್ಷಕರು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡಬೇಕು. ಕಸವನ್ನು ರಸ್ತೆಗಳಲ್ಲಿ ಹಾಕದೆ ಶುಚಿತ್ವದ ಬಗ್ಗೆ ಮಕ್ಕಳು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸುಜಾತ, ಅಪೌಷ್ಟಿತೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಬಿಸಿ ಊಟದಲ್ಲಿ ತರಕಾರಿ ಸೇವನೆ ಮಾಡಬೇಕು, ಕಬ್ಬಿಣಾಂಶದ ಮಾತ್ರೆಗಳನ್ನು ಅಯೋಡಿನ್ಯುಕ್ತ ಉಪ್ಪನ್ನೇ ಬಳಸುವದರಿಂದ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಬಲ್ಲದು.
ಶುಚಿತ್ವದ ಬಗ್ಗೆ ಹೆಣ್ಣುಮಕ್ಕಳು ಒಳ ಉಡುಪುಗಳನ್ನು ಶುಚಿಯಾಗಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ, ಸದಸ್ಯರುಗಳಾದ ರಾಜಶೇಖರ್, ರಾಮಕೃಷ್ಣ, ಮಂಜುಳ, ಸಾಹಿನ್, ನೋಡಲ್ ಅಧಿಕಾರಿ ವಿ.ಕೆ. ಮಹದೇವ್, ಸಹಾಯಕ ನಿರೀಕ್ಷಕ ಎಂ. ಕೆ. ಮೇದಪ್ಪ ಉಪಸ್ಥಿತರಿದ್ದರು.
-ಚಿತ್ರ, ವರದಿ : ಎನ್.ಎನ್. ದಿನೇಶ್