ಸೋಮವಾರಪೇಟೆ, ಡಿ. 18: ವಿವೇಕಾನಂದ ಯೂತ್ ಮೂವ್ ಮೆಂಟ್ ಹಾಗೂ ಸೋಮವಾರಪೇಟೆ ರೋಟರಿ ಹಿಲ್ಸ್ ವತಿಯಿಂದ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ತಾಲೂಕಿನ ವಿದ್ಯಾರ್ಥಿಗಳಿಗೆ ವಿಜ್ಞಾನ ಮೇಳವನ್ನು ಏರ್ಪಡಿಸಲಾಗಿತ್ತು.

ಕಾರ್ಯಾಗಾರವನ್ನು ಸೋಮವಾರಪೇಟೆ ರೋಟರಿ ಸಂಸ್ಥೆ ಅಧ್ಯಕ್ಷ ಪಿ.ಕೆ. ರವಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನದ ಆವಿಷ್ಕಾರಗಳ ಕುರಿತು ವಿಶೇಷವಾಗಿ ಅಧ್ಯಯನ ಮಾಡಬೇಕು ಎಂದರು.

ವಿಜ್ಞಾನ ಮೇಳದಲ್ಲಿ ಸೋಮವಾರಪೇಟೆ ತಾಲೂಕಿನ 24 ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ವಿಜ್ಞಾನ ಅಧ್ಯಾಪಕರು ಭಾಗವಹಿಸಿದ್ದರು. ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಆಧುನಿಕ ಉಪಕರಣಗಳು, ಇಂದಿನ ಸಮಾಜಕ್ಕೆ ಉಪಯೋಗವಾಗುವ ವಿಜ್ಞಾನ ಸಲಕರಣೆಗಳ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಕ್ರಮದ ಉದ್ದೇಶದ ಕುರಿತು ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ತಾಲೂಕು ಸಂಯೋಜಕ ಬಿ.ಎಸ್. ಸದಾನಂದ ಮಾಹಿತಿ ನೀಡಿದರು. ಈ ಸಂದರ್ಭ ರೋಟರಿ ಸದಸ್ಯ ಡಿ.ಪಿ. ರಮೇಶ್, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪದವೀಧರ ಮುಖ್ಯೋಪಾ ಧ್ಯಾಯಿನಿ ಎಂ.ಜೆ. ಅಣ್ಣಮ್ಮ, ಶಿಕ್ಷಕ ರಮೇಶ್ ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಸಂಯೋಜಕ ಅಮಿತ್ ಭಾಗವಹಿಸಿ ಮಾತನಾಡಿ, ವಿಜ್ಞಾನ ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಸರಗೂರಿನ ವಿವೇಕಾನಂದ ಯೂತ್ ಮೂವ್ ಮೆಂಟ್ ಉತ್ತಮ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದ ಕುರಿತು ಆಸಕ್ತಿ ಮೂಡಿಸುವ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳು ಹಾಗೂ ಶಾಲಾ ಅಧ್ಯಾಪಕರುಗಳು ಇದರ ಲಾಭ ಪಡೆಯುವಂತೆ ಮನವಿ ಮಾಡಿದರು. ವಿಜ್ಞಾನ ಮೇಳದ ಪ್ರಾತ್ಯಕ್ಷಿಕೆಯಲ್ಲಿ ಶನಿವಾರಸಂತೆಯ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ, ತೊರೆನೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಗಳು ದ್ವಿತೀಯ ಸ್ಥಾನವನ್ನು ಪಡೆದರು.

ಅಳಗುಳಿ ಆಟದಲ್ಲಿ ಕೂಡಿಗೆಯ ಸರಕಾರಿ ಕ್ರೀಡಾಶಾಲೆಯ ಐಶ್ವರ್ಯ ಪ್ರಥಮ, ಆಲೂರು ಸಿದ್ದಾಪುರದ ಮೊರಾರ್ಜಿ ವಸತಿ ಶಾಲೆಯ ಬಿಪಿನ್ ದಾಸ್ ದ್ವಿತೀಯ ಸ್ಥಾನ ಗಳಿಸಿದರು. ಮೈನಸ್ ಇಂಟು ಮೈನಸ್ ಆಟದಲ್ಲಿ ಮೊರಾರ್ಜಿ ಶಾಲೆಯ ರಾಹುಲ್ ಪ್ರಥಮ, ಅಂಕನಹಳ್ಳಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವರುಣ್ ದ್ವಿತೀಯ ಸ್ಥಾನ ಪಡೆದರು. ಸೋಮವಾರಪೇಟೆ ರೋಟರಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಹೆಚ್.ಸಿ. ನಾಗೇಶ್, ಕಾಯಕ್ರಮ ಸಂಯೋಜಕ ಬಿ.ಎಸ್. ಸದಾನಂದ್, ರೋಟರಿ ಸದಸ್ಯ ಎಸ್.ಬಿ. ಯಶವಂತ್ ಅವರುಗಳು ವಿಜೇತರಿಗೆ ಬಹುಮಾನ ವಿತರಿಸಿದರು. ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರಾಜೇಶ್ವರಿ ಕಾರ್ಯಕ್ರಮವನ್ನು ನಿರ್ವಹಿಸಿದರು.