ಮೂರ್ನಾಡು, ಡಿ. 18: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ವಿದ್ಯಾರ್ಥಿಗಳ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.

ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾಹಿತಿಗಾರರಾಗಿ ಆಗಮಿಸಿದ ಸಮಾಜ ಸೇವಕರಾದ ಎ.ಪಿ. ಧನಂಜಯ್ ವಿದ್ಯಾರ್ಥಿಗಳಲ್ಲಿ ದುಶ್ಚಟಗಳು ಯಾವ ರೀತಿ ಬೆಳೆಯುತ್ತದೆ. ಇದರಿಂದ ದೂರ ಇರಬೇಕಾದರೆ ವಿದ್ಯಾರ್ಥಿಗಳು ಏನು ಮಾಡಬೇಕು, ವಿದ್ಯಾರ್ಥಿಗಳ ಮುಂದಿನ ಜೀವನ ಹಾಗೂ ಸಮಾಜವನ್ನು ಯಾವ ರೀತಿ ಜಾಗೃತಿಗೊಳಿಸಬೇಕು ಎಂಬದರ ಕುರಿತು ಮಾಹಿತಿ ನೀಡಿದರು.

ಮೂರ್ನಾಡು ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ದೇಚಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿ ಆಗದೆ ಮುಂದೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೂರ್ನಾಡು ವಲಯ ಮೇಲ್ವಿಚಾರಕಿ ಜಯಶ್ರಿ, ಕಾರ್ಯಕ್ಷೇತ್ರ ಸೇವಾಪ್ರತಿನಿಧಿ ಶಿವಾನಂದ್, ಮೂರ್ನಾಡು ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಉಪಸ್ಥಿತರಿದ್ದರು.