ಗೋಣಿಕೊಪ್ಪ ವರದಿ, ಡಿ. 19: ಗ್ರಾಮ ಪಂಚಾಯಿತಿ ಸದಸ್ಯರುಗಳು ಪರಸ್ಪರ ರಾಜಕೀಯ ಮಾಡುವದನ್ನು ಬಿಟ್ಟು ಗ್ರಾಮಸ್ಥರ ಸಮಸ್ಯೆ ಆಲಿಸಿ ಎಂದು ಗೋಣಿಕೊಪ್ಪ ಗ್ರಾಮದ ಮಹಿಳೆಯರು ಒತ್ತಾಯಿಸಿದರು.
ಪಂಚಾಯಿತಿ ಸಭಾಂಗಣದಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಮಹಿಳಾ ಗ್ರಾಮಸಭೆಯಲ್ಲಿ ಈ ಬಗ್ಗೆ ಮಹಿಳೆಯರು ಒತ್ತಾಯಿಸಿದರು. ಪಂಚಾಯಿತಿ ಯಿಂದ ರಾಜಕೀಯ ಬಿಟ್ಟು ಗ್ರಾಮ, ಬಡಾವಣೆಗಳತ್ತ ಬಂದು ಸಮಸ್ಯೆ ಆಲಿಸಿ ಎಂದು ಒತ್ತಾಯಿಸಿದರು. ಯಾವ ಸಮಸ್ಯೆ ಹೊತ್ತು ಪಂಚಾಯಿತಿಗೆ ಹೋದರು ಅಲ್ಲಿ ರಾಜಕೀಯಗಳೇ ಹೆಚ್ಚಾಗಿ ಡನೆಯುತ್ತಿದೆ. ಇದರಿಂದ ದೂರು ಹೊತ್ತು ಹೋಗಲು ಆಗುತ್ತಿಲ್ಲ ಎಂದು ಮಹಿಳೆಯರು ನೋವು ಹಂಚಿಕೊಂಡರು. ಮಹಿಳೆ ಸಮಸ್ಯೆ ಹೊತ್ತು ಪಂಚಾಯಿತಿಗೆ ಬಂದಾಗ ಸದಸ್ಯರುಗಳೇ ಮಹಿಳೆಯನ್ನು ಹೊರಗೆ ಹೋಗಿ ಎಂದು ಅಸಭ್ಯವಾಗಿ ವತಿಸಿದ ಘಟನೆ ನಡೆದಿದೆ. ಅಧ್ಯಕ್ಷೆ ಎದುರೇ ಇಂತಹ ಘಟನೆಗಳು ನಡೆದಿದ್ದರೂ ಅಧ್ಯಕ್ಷರು ಗ್ರಾಸಮ್ಥರ ಪರವಾಗಿ, ಒಂದು ಮಹಿಳೆಯ ಪರವಾಗಿ ನಿಲ್ಲಲಿಲ್ಲ. ಇಂತಹ ರಾಜಕೀಯ ಅವ್ಯವಸ್ಥೆಯನ್ನು ಬಿಟ್ಟು ಅಭಿವೃದ್ಧಿಗೆ ಒತ್ತು ನೀಡುವಂತೆ ಒತ್ತಾಯಿಸಿದರು.
ಮಹಿಳೆಯರಿಗಾಗಿ ಅಯೋಜಿಸಿರುವ ಮಹಿಳಾ ಸಭೆಗೆ ಪಂಚಾಯಿತಿಯ 9 ಮಂದಿ ಮಹಿಳಾ ಸದಸ್ಯರುಗಳು ಗೈರಾಗಿರುವ ಬಗ್ಗೆ ಗ್ರಾಮಸ್ಥರು ಅಸಮದಾನ ವ್ಯಕ್ತಪಡಿಸಿದರು. ಮಹಿಳಾ ಸದಸ್ಯರಿಗೆ ಸಮಸ್ಯೆ ಆಲಿಸಲು ಆಸಕ್ತಿ ಇಲ್ಲ ಎಂಬ ಆರೋಪ ವ್ಯಕ್ತವಾಯಿತು.
ಕುಡಿಯುವ ನೀರು ಬಿಡುವಾಗ ಸಮಯ ಪಾಲನೆ ಮಾಡುತ್ತಿಲ್ಲ. ಇದರಿಂದಾಗಿ ಕೂಲಿ ಬಿಟ್ಟು ಮನೆಯಲ್ಲಿಯೇ ನೀರಿಗಾಗಿ ಕಾಯುವ ಸ್ಥಿತಿ ಬಂದಿದೆ. ನೀರುವ ಬಿಡುವಾಗ ಸಮಯಪಾಲನೆ ಮಾಡುವಂತೆ ಮಹಿಳೆಯರು ಒತ್ತಾಯಿಸಿದರು. ಚರಂಡಿಗಳ ಗಬ್ಬು ವಾಸನೆಗಳನ್ನು ಹೋಗಲಾಡಿಸಲು ವಾರಕೊಮ್ಮೆ ಚರಂಡಿ ಸ್ವಚ್ಛಗೊಳಿಸಲು ಒತ್ತಾಯಿಸಿಸಲಾಯಿತು.
ಪೊಲೀಸ್ ಸಿಬ್ಬಂದಿ ಶೋಭಾ ಮಾತನಾಡಿ, ಹದಿಹರೆಯದ ಮಕ್ಕಳ ಮೇಲೆ ಹೆಚ್ಚು ಅತ್ಯಾಚಾರ, ಲೈಂಗಿಕ ಕಿರುಕುಳ ಇಂತಹ ಪ್ರಕರಣಗಳು ನಡೆಯುತ್ತಿದೆ. ಇದನ್ನು ಮನಗಂಡು ಪೋಷಕರು ಎಚ್ಚರದಿಂದ ನೋಡಿಕೊಳ್ಳಬೇಕಿದೆ. ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ ಪೊಲೀಸ್ ಇಲಾಖೆಯ ಸಹಕಾರ ಪಡೆದುಕೊಳ್ಳಬೇಕಿದೆ. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಹೆಚ್ಚಿದ್ದು, ಯಾವದೇ ಉಳುಕಿಲ್ಲದೆ ಸಮಸ್ಯೆಯನ್ನು ಹಂಚಿಕೊಳ್ಳಬಹುದು ಎಂದರು.
ಪಿಡಿಓ ಚಂದ್ರಮೌಳಿ ಮಾತನಾಡಿ, ಗ್ರಾಮ ಅಭಿವೃದ್ಧಿಯೊಂದಿಗೆ ವಿಶೇಷ ಮಕ್ಕಳು, ಗರ್ಭಿಣಿಯರಿಗೆ ಅನುಕೂಲ ವಾಗುವಂತೆ, ಮಹಿಳೆಯರಿಗೆ ಸಿಗುವ ಸೌಲಭ್ಯ, ಶಿಶುಮರಣ ನಿಯಂತ್ರಣ, ಬಾಲ್ಯ ವಿವಾಹ ತಡೆಗಟ್ಟುವದು, ಮಹಿಳೆಯರಿಗೆ ಇರುವ ಕಾನೂನು ಅರಿವು ಮೂಡಿಸಲು ಮಹಿಳಾ ಸಭೆ ನಡೆಸಲಾಗುತ್ತಿದೆ. ಈ ಬಗ್ಗೆ ಮಹಿಳೆಯರು ಹೆಚ್ಚಾಗಿ ಕಾಳಾಜಿ ತೆಗೆದುಕೊಳ್ಳಬೇಕಿದೆ. ಸರ್ಕರದ ಸವಲತ್ತು ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಸದಸ್ಯರುಗಳಾದ ಮಂಜುಳ, ಮುರುಗ, ಯಾಸ್ಮಿನ್, ಶಾಹಿನ್, ಧನಲಕ್ಷ್ಮಿ ಉಪಸ್ಥಿತರಿದ್ದರು. ಮಹದೇವು ನೋಡೆಲ್ ಅಧಿಕಾರಿ ಯಾಗಿ ಕಾರ್ಯನಿರ್ವಹಿಸಿದರು. ಇಲಾಖೆ ಅಧಿಕಾರಿಗಳು ಸಭೆಗೆ ಬಾರದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಯಿತು.