ವೀರಾಜಪೇಟೆ, ಡಿ. 19: ವೀರಾಜಪೇಟೆಯ ತೆಲುಗರ ಬೀದಿಯ ಅಂಗಾಳ ಪರಮೇಶ್ವರಿ ಮತ್ತು ಮಾರಿಯಮ್ಮ ದೇವಾಲಯದಲ್ಲಿ ಕಾವಲುಗಾರರಾಗಿ ನಾಲ್ಕು ದೈವಗಳಿದ್ದು ಆರಂಭದಲ್ಲಿ ಮಧುರ್ಯೆ ವೀರಸ್ವಾಮಿ ದೈವದ ವಿಗ್ರಹವನ್ನು ಸ್ಥಾಪಿಸಲಾಗಿದ್ದು, ತಾ. 24 ರಂದು ಸಮರ್ಪಣಾ ಮಹೋತ್ಸವ ನಡೆಯಲಿದೆ ಎಂದು 24 ಮನೆ ತೆಲುಗು ಶೆಟ್ಟಿ ಕೂಟಂನ ಎಂ.ಬಿ. ಸತೀಶ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತೀಶ್ ಶೆಟ್ಟಿ ಪೂರ್ವಿಕರ ಕಾಲದಿಂದಲೂ ಕಾವಲ್ ದೈವಗಳನ್ನು ಪೂಜಿಸುತ್ತಾ ಬರುತ್ತಿದ್ದು, ನಮ್ಮ ಜನಾಂಗ ಹಾಗೂ ಲೋಕದ ಹಿತಕ್ಕಾಗಿ ದೈವವಾಕ್ಯದಂತೆ ಶಕ್ತಿಮಯ ಸ್ಥಾನಗಳು ಪುನರ್ ಜೀರ್ಣೋದ್ದಾರಗೊಂಡು ದೈವಗಳ ನಿತ್ಯ ಪೂಜೆಯಾಗಬೇಕು ಎಂಬ ಅಣತಿಯಂತೆ ಮಧುರೈ ವೀರಸ್ವಾಮಿ, ಬೊಮ್ಮಿಯಮ್ಮ ಮತ್ತು ವೆಳ್ಳಿಯಮ್ಮ ವಿಗ್ರಹವನ್ನು ಹೊಸದಾಗಿ ಸ್ಥಾಪಿಸಲಾಗಿದೆ. ನಂತರದ ದಿನಗಳಲ್ಲಿ ಜಡೆಮುನೀಶ್ವರರ್, ಸಂಗಳಿಕರುಪ್ಪನ್, ಪಾವಾಡರಾಯನ್ ವಿಗ್ರಹವನ್ನು ಸ್ಥಾಪಿಸಲಾಗುವದು.
ದೈವವಾಕ್ಯದಂತೆ 48 ದಿನಗಳಲ್ಲಿ ಕಾವiಗಾರಿ ಪೂರ್ಣಗೊಳಿಸುವ ಸಲುವಾಗಿ ಕಾಮಗಾರಿಯನ್ನು ನವೆಂಬರ್ 13 ರಂದು ಪ್ರಾರಂಭಿಸಿ 41 ದಿನಗಳಲ್ಲಿ ಪೂರ್ಣಗೊಳಿಸಲಾಗುವದು. ಉಳಿದ 7 ದಿನಗಳಲ್ಲಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುವದು. ತಾ. 24 ರಿಂದ 30 ರವರೆಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಗುವದು. 29ರಂದು ಫಲ ತಾಂಬೂಲ ಸಮರ್ಪಣೆ, ಪಟಾಕಿ ಉತ್ಸವ, ಹುಲಿಯಾಟ್, ಧ್ವಜಸ್ತಂಭ, ತಾ. 30 ರಂದು ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಟಿ.ಜಿ. ಯೋಗೀಶ್ ಶೆಟ್ಟಿ, ಟಿ.ಎನ್ ಕರುಣ್ ಕುಮಾರ್, ಕಿಶೋರ್‍ಶೆಟ್ಟಿ, ಟಿ.ಪಿ. ತುಕಾರಾಂ ಶೆಟ್ಟಿ ಉಪಸ್ಥಿತರಿದ್ದರು.