ಮಡಿಕೇರಿ, ಡಿ.19: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕೊಡಗು ಜಿಲ್ಲೆಯಲ್ಲಿರುವ ಒಟ್ಟು ಡಿಪೋಗಳ ಸಂಖ್ಯೆ ಎಷ್ಟು ಇಲ್ಲಿಗೆ ಮಂಜೂರಾದ ಹುದ್ದೆಗಳು ಹಾಗೂ ಭರ್ತಿಯಾಗಿರುವ ಹುದ್ದೆಗಳೆಷ್ಟು ಎಂದು ಶಾಸಕ ಸುನೀಲ್ ಸುಬ್ರಮಣಿ ಪ್ರಶ್ನೆಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾಹಿತಿ ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಒಂದು ಬಸ್ಸು ಡಿಪೋ ಮಡಿಕೇರಿಯಲ್ಲಿರುತ್ತದೆ. ಈ ಘಟಕಕ್ಕೆ ಮಂಜೂರಾದ ಹುದ್ದೆಗಳು 542 ಹಾಗೂ ಭರ್ತಿಯಾಗಿರುವ ಹುದ್ದೆಗಳು 481 ಎಂದು ಹೇಳಿದರು.
ಈ ಡಿಪೋಗಳಲ್ಲಿರುವ ಎರಡು ವರ್ಷಗಳ ಒಳಗಿನ ಹಾಗೂ ಅದಕ್ಕಿಂತ ಹಳೆಯ ಐರಾವತ, ರಾಜಹಂಸ, ಕರ್ನಾಟಕ ಸಾರಿಗೆ ಬಸ್ಗಳ ಸಂಖ್ಯೆ ಎಷ್ಟು ಎಂಬ ಶಾಸಕರ ಪ್ರಶ್ನೆಗೆ ಎರಡು ವರ್ಷದೊಳಗಿನ ಕರ್ನಾಟಕ ಸಾರಿಗೆ 30, 2 ವರ್ಷ ಮೇಲ್ಪಟ್ಟಿರುವ ವಾಹನ ರಾಜಹಂಸ 11 ಮತ್ತು ಕರ್ನಾಟಕ ಸಾರಿಗೆ 53 ಇವೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಗೆ ಮಿನಿ ಬಸ್ಗಳನ್ನು ಕೊಳ್ಳಲಾಗಿದೆಯೇ. ಇದ್ದಲ್ಲಿ ಅವುಗಳ ಸಂಖ್ಯೆ ಎಷ್ಟು. ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಮಡಿಕೇರಿ ಘಟಕಕ್ಕೆ ತಾತ್ಕಾಲಿಕವಾಗಿ ಬೇರೆ ವಿಭಾಗಗಳಿಂದ ಮಿನಿ ವಾಹನಗಳನ್ನು ತರಿಸಿ ಕಾರ್ಯಾಚರಣೆ ಮಾಡಲಾಗಿರುತ್ತದೆ. ಪ್ರಸ್ತುತ ಅವುಗಳಲ್ಲಿ 4 ವಾಹನಗಳು ಮಾತ್ರ ಮಡಿಕೇರಿ ಘಟಕದಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಮಾಹಿತಿ ನೀಡಿದ್ದಾರೆ.
ಫಾರ್ಮಾಲಿನ್ ರಾಸಾಯನಿಕ ವಸ್ತುವನ್ನು ತರಕಾರಿಗಳು ಕೆಡದಂತೆ, ಆಹಾರ ಸಾಮಾಗ್ರಿಗಳು ಹಾಗೂ ಮೀನು ಮಾಂಸ ಕೆಡದಂತೆ ಇಡಲು ಬಳಸುತ್ತಿದ್ದಾರೆಂದು ವರದಿಯಾಗಿರುವದು ಸರ್ಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳೇನು ಎಂದು ಸುನೀಲ್ ಸುಬ್ರಮಣಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರನ್ನು ಪ್ರಶ್ನಿಸಿದರು.
ರಾಜ್ಯದಲ್ಲಿ 97 ಆಹಾರ ಮಾದರಿಗಳನ್ನು (ತರಕಾರಿಗಳು, ಆಹಾರ ಸಾಮಾಗ್ರಿಗಳು ಹಾಗೂ ಮೀನು ಮಾಂಸ) ಸಂಗ್ರಹಿಸಿ ಪ್ರಯೋಗಾಲಯದಲ್ಲಿ ವಿಶ್ಲೇಷಣೆಗೊಳಪಡಿಸಿದಾಗ, 92 ಆಹಾರ ಮಾದರಿಗಳು ಸುರಕ್ಷಿತ ಎಂದು ದೃಢಪಟ್ಟಿದೆ ಹಾಗೂ 5 ಹಣ್ಣುಗಳ ಆಹಾರ ಮಾದರಿಗಳು ಪ್ರಯೋಗಾಲಯದಲ್ಲಿ ವಿಶ್ಲೇಷಣಾ ಹಂತದಲ್ಲಿವೆ. ಆಹಾರ ಸುರಕ್ಷತಾಧಿಕಾರಿಗಳು ಮತ್ತು ಮೀನುಗಾರಿಕಾ ಇಲಾಖೆ ಸಹಯೋಗದೊಂದಿಗೆ ಹೆಚ್ಚುವರಿ ಖಾತರಿಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 6 ಮಾದರಿಗಳನ್ನು ಸಂಗ್ರಹಿಸಿ ಎನ್ಎಬಿಎಲ್ ಪ್ರಯೋಗ ಶಾಲೆಯಲ್ಲಿ ವಿಶ್ಲೇಷಣೆಗೊಳಪಡಿಸಲಾಗಿ, ಮೀನುಗಳಿಗೆ ಫಾರ್ಮಾಲಿನ್ ರಾಸಾಯನಿಕ ಬಳಸಿಲ್ಲವೆಂದು ವರದಿಯಲ್ಲಿ ದೃಢಪಟ್ಟಿದೆ ಎಂದರು.