ಸೋಮವಾರಪೇಟೆ, ಡಿ. 19: ಪ್ಲಾಸ್ಟಿಕ್ ಹೊದಿಕೆ, ತಗಡಿನ ಶೀಟುಗಳ ಅಡಿಯಲ್ಲಿ ನಡೆಯುತ್ತಿದ್ದ ಸೋಮವಾರಪೇಟೆಯ ಸಂತೆ, ರಾಜ್ಯ ಸರ್ಕಾರದ ಅನುದಾನದಿಂದ ಕಳೆದ 2012ರಲ್ಲಿ ಹೈಟೆಕ್ ಮಾರುಕಟ್ಟೆ ಯಾಗಿ ಮೇಲ್ದರ್ಜೆಗೇರಿದರೂ, ಅವೈಜ್ಞಾನಿಕ ನಿರ್ವಹಣೆ ಯಿಂದ ಇಂದಿಗೂ ಸಹ ಸದಾ ಸುದ್ದಿಯಲ್ಲಿಯೇ ಇರುತ್ತದೆ.
ಮುಖ್ಯಮಂತ್ರಿಗಳ ಮಧ್ಯಮ ಮತ್ತು ಸಣ್ಣ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ರೂ. 1.25 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಹೈಟೆಕ್ ಮಾರುಕಟ್ಟೆ ಹೆಸರಿಗಷ್ಟೇ ಹೈಟೆಕ್ ಆಗಿದ್ದು, ಸಮಸ್ಯೆಗಳಿಗೇನೂ ಕೊರತೆಯಿಲ್ಲ ಎಂಬಂತಾಗಿದೆ. ಕೋಟಿ ವೆಚ್ಚದ ಮಾರುಕಟ್ಟೆಯಾದರೂ ಅವೈಜ್ಞಾನಿಕ ನಿರ್ಮಾಣದಿಂದ ಇಂದಿಗೂ ವರ್ತಕರು ಹಾಗೂ ಗ್ರಾಹಕರು ಮಬ್ಬುಗತ್ತಲೆಯಲ್ಲೇ ವ್ಯಾಪಾರ ವಹಿವಾಟು ನಡೆಸಬೇಕಿದೆ.
ಸಾವಿರಾರು ರೂಪಾಯಿ ವ್ಯಯಿಸಿ ಅಳವಡಿಸಿರುವ ಹೈಮಾಸ್ಟ್ ದೀಪಗಳು ಕೆಟ್ಟು ವರ್ಷಗಳೇ ಕಳೆದಿರುವ ಪರಿಣಾಮ ಸಂಜೆಯಾಗುತ್ತಲೇ ಮಾರುಕಟ್ಟೆಯ ಆವರಣದೊಳಗೆ ಕತ್ತಲು ಕವಿಯುತ್ತದೆ. ಮಬ್ಬುಗತ್ತಲಿನಲ್ಲಿ ವರ್ತಕರು ಹಾಗೂ ಗ್ರಾಹಕರು ಮೊಬೈಲ್ ಟಾರ್ಚ್ ಹಾಗೂ ಎಮರ್ಜೆನ್ಸಿ ಲೈಟ್‍ಗಳ ಮೂಲಕ ವ್ಯಾಪಾರ ವಹಿವಾಟು ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕೋಟಿ ವೆಚ್ಚದ ಮಾರುಕಟ್ಟೆಯಲ್ಲಿ ಸೂಕ್ತ ಸೌಲಭ್ಯಗಳೇ ಇಲ್ಲ. ಕನಿಷ್ಟ ಪಕ್ಷ ಬೆಳಕಿನ ವ್ಯವಸ್ಥೆಯೂ ಇಲ್ಲ. ಮಾರುಕಟ್ಟೆಗೆ ಸರಂಜಾಮುಗಳನ್ನು ಸಂಜೆ ಅಥವಾ ರಾತ್ರಿ ಸಾಗಿಸಬೇಕಿದ್ದು, ಸೋಮವಾರದಂದು ಸಂಜೆ 7 ಗಂಟೆಯವರೆಗೂ ಸಂತೆ ನಡೆಯುತ್ತದೆ. ಆದರೆ ಬೆಳಕಿನ ವ್ಯವಸ್ಥೆ ಇಲ್ಲದೇ ಇರುವದರಿಂದ ವ್ಯಾಪಾರಕ್ಕೆ ತೊಡಕಾಗುತ್ತಿದೆ. ಪಟ್ಟಣ ಪಂಚಾಯಿತಿಯವರು ಈ ಬಗ್ಗೆ ತಕ್ಷಣ ಗಮನ ಹರಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕೆಂದು ವರ್ತಕರು ಒತ್ತಾಯಿಸಿದ್ದಾರೆ.