ಮಡಿಕೇರಿ, ಡಿ. 19: ‘ಸಾಹಿತ್ಯ ರಚನೆ ಭಾರತೀಯವಾಗಲಿ’ ಎನ್ನುವ ಪ್ರಧಾನ ಆಶಯವನ್ನು ಆಧರಿಸಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ದ್ವಿತೀಯ ರಾಜ್ಯ ಸಮ್ಮೇಳನ ತಾ. 29 ಮತ್ತು 30 ರಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಅಂಕಣಕಾರ ಪ್ರೊ. ಪ್ರೇಮಶೇಖರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪರಿಷದ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್, ರಾಷ್ಟ್ರದ ವಿವಿಧ ಪ್ರದೇಶಗಳಲ್ಲಿನ ಸಾಹಿತ್ಯ ವಲಯವನ್ನು ಒಗ್ಗೂಡಿಸುವ ಕಾರ್ಯವನ್ನು ಪರಿಷದ್ ಕಳೆದ 55 ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಪರಿಷದ್ ಸಾಹಿತ್ಯಿಕ ಚಟುವಟಿಕೆಗಳಲ್ಲಿ ನಿರತವಾಗಿದ್ದು, ಮೂರು ವರ್ಷಗಳ ಹಿಂದಷ್ಟೆ ಉತ್ತರ ಕನ್ನಡದಲ್ಲಿ ‘ಕೌಟುಂಬಿಕ’ ವಿಷಯವನ್ನು ಆಧರಿಸಿದ ಮೊದಲ ರಾಜ್ಯ ಸಮ್ಮೇಳನವನ್ನು ನಡೆಸಿದ್ದಾಗಿ ಮಾಹಿತಿಯನ್ನಿತ್ತರು.

ಮೈಸೂರಿನಲ್ಲಿ ಆಯೋಜಿತ ಸಮ್ಮೇಳನದಲ್ಲಿ 3 ಸಾವಿರ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಹೊಂದಿರುವದಾಗಿ ತಿಳಿಸಿದರು. ಸಮ್ಮೇಳನವನ್ನು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಇನ್ಫೋಸಿಸ್‍ನ ಅಧ್ಯಕ್ಷೆ ಪದ್ಮಶ್ರೀ ಪುರಸ್ಕøತ ಡಾ. ಸುಧಾಮೂರ್ತಿ ಪಾಲ್ಗೊಳ್ಳಲಿದ್ದಾರೆ. ಅಭಾಸಾಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಋಷಿಕುಮಾರ್ ಮಿಶ್ರಾ ದಿಕ್ಸೂಚಿ ಭಾಷಣ ಮಾಡಲಿದ್ದು, ಪರಿಷತ್‍ನ ರಾಜ್ಯ ಘಟಕದ ಅಧ್ಯಕ್ಷ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆಂದು ವಿವರಗಳನ್ನಿತ್ತರು.

ಸಮ್ಮೇಳನದಲ್ಲಿ ‘ಕರ್ನಾಟಕದ ಭಾಷೆಗಳ ಸಾಹಿತ್ಯದಲ್ಲಿ ಭಾರತೀಯತೆ’ ವಿಷಯದ ಕುರಿತು ಮೊದಲ ಗೋಷ್ಠಿ ನಡೆಯಲಿದ್ದು, ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ದಿವಾಕರ ಹೆಗಡೆ ವಿಷಯ ಮಂಡಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಭಾಸಾಪ ಉಪಾಧ್ಯಕ್ಷ ಬಾಗಲಕೋಟೆಯ ಹೆಚ್.ಸಿ. ಕೋಠಿ ವಹಿಸಲಿದ್ದಾರೆ. ದ್ವಿತೀಯ ಗೋಷ್ಠಿ ‘ಸಂಸ್ಕøತ ಭಾಷೆಯಲ್ಲಿ ಭಾರತೀಯತೆ’ ವಿಷಯದಡಿ ನಡೆಯಲಿದ್ದು, ಬೆಂಗಳೂರಿನ ಸಂಸ್ಕøತ ವಿದುಷಿ ಡಾ. ಎಸ್.ಆರ್. ಲೀಲಾ ವಿಷಯ ಮಂಡಿಸಲಿದ್ದಾರೆ, ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಪ್ರೊ. ಸಿ.ಪಿ. ಕೃಷ್ಣ ಕುಮಾರ್ ವಹಿಸಲಿದ್ದಾರೆ. ಮೂರನೇ ಗೋಷ್ಠಿ ‘ಹಿಂದಿ ಸಾಹಿತ್ಯದಲ್ಲಿ ಭಾರತೀಯತೆ’ ವಿಷಯದಡಿ ನಡೆಯಲಿದ್ದು, ಮೈಸೂರು ವಿವಿಯ ವಿಶ್ರಾಂತ ಹಿಂದಿ ಪ್ರಾಧ್ಯಾಪಕ ಹಾಗೂ ಸಾಹಿತಿಗÀಳಾದ ಡಾ. ತಿಪ್ಪೇಸ್ವಾಮಿ ವಿಚಾರ ಮಂಡಿಸಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ವಿಶ್ವ ವಿದ್ಯಾಲಯದ ಪ್ರಸಾರಾಂಗ ವಿಭಾಗದ ಉಪ ನಿರ್ದೇಶಕ ಡಾ. ಚಂದ್ರಶೇಖರ್ ವಹಿಸಲಿದ್ದಾರೆ ಎಂದರು.

ಕನ್ನಡವನ್ನು ಒಳಗೊಂಡಂತೆ ರಾಜ್ಯದಲ್ಲಿ ಬಳಕೆಯಲ್ಲಿರುವ ಕೊಡವ, ಕೊಂಕಣಿ, ತುಳು ಭಾಷೆ ಸೇರಿದಂತೆ ಗಡಿಭಾಗದ ರಾಜ್ಯಗಳ ಭಾಷೆಗಳ ಕವಿಗಳನ್ನು ಒಳಗೊಂಡಂತೆ ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು, ನಿವೃತ್ತ ಪ್ರಾಂಶುಪಾಲ ಕವಿ ಎಂ.ಕೆ. ಹಂಪಣ್ಣ ಅಧ್ಯಕ್ಷತೆ ವಹಿಸಲಿದ್ದಾರೆಂದು ಹೇಳಿದರು.

ಸಮ್ಮೇಳನದಲ್ಲಿ ಐವರು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ತಿಳಿಸಿದ ರಘುನಂದನ್, ತಾ. 30 ರಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ಪ್ರಜ್ಞಾ ಪ್ರವಾಹದ ಅಖಿಲ ಭಾರತ ಸಂಯೋಜಕ ಜೆ. ನಂದ ಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆಂದರು.

ಸಾಹಿತ್ಯ ಸಮ್ಮೇಳನದ ಪ್ರಚಾರ ವಿಭಾಗದ ಉಸ್ತುವಾರಿ ಶಿವರಂಜಿನಿ ಮಾತನಾಡಿ, ಈಗಾಗಲೇ ಸಾಹಿತ್ಯ ಸಮ್ಮೇಳನಕ್ಕೆ ಪೂರಕವಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಡಿಕೇರಿ ಘಟಕಕ್ಕೆ ಆಯ್ಕೆ: ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಮಡಿಕೇರಿ ನಗರ ಘಟಕದ ಅಧ್ಯಕ್ಷರಾಗಿ ಅಂಬೆಕಲ್ ಸುಶೀಲ, ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ಆಯ್ಕೆಯಾಗಿರುವದನ್ನು ಇದೇ ಸಂದರ್ಭ ರಘುನಂದನ್ ತಿಳಿಸಿದರು.

ಗೋಷ್ಠಿಯಲ್ಲಿ ಪರಿಷತ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋರನ ಸುನಿಲ್, ಜಿಲ್ಲಾ ಸಂಚಾಲಕ ಎಂ.ಕೆ. ಜಯಕುಮಾರ್ ಉಪಸ್ಥಿತರಿದ್ದರು.