ಕುಶಾಲನಗರ, ಡಿ 19: ರೋಗಿಗಳನ್ನು ಸಾಗಿಸುವ ಖಾಸಗಿ ಆ್ಯಂಬ್ಯುಲೆನ್ಸ್ (ಕೆಎ.12.ಬಿ.4235) ಒಂದರಲ್ಲಿ ಹರಳು ಕಲ್ಲುಗಳನ್ನು ತುಂಬಿ ಸಾಗಿಸುತ್ತಿದ್ದ ಪ್ರಕರಣವನ್ನು ಕುಶಾಲನಗರ ಪೊಲೀಸರು ಪತ್ತೆ ಹಚ್ಚಿದ್ದು ನಾಲ್ವರನ್ನು ಬಂಧಿಸಿದ್ದಾರೆ.ಮಡಿಕೇರಿ ಕಡೆಯಿಂದ ಕುಶಾಲನಗರಕ್ಕೆ ಬರುತ್ತಿದ್ದ ಆ್ಯಂಬ್ಯುಲೆನ್ಸ್ ವಾಹನದಲ್ಲಿ ಪೂರ್ತಿ ಹರಳು ಕಲ್ಲು ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ದೊರೆತ ಕುಶಾಲನಗರ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದು, ಅಂದಾಜು ರೂ. 50 ಸಾವಿರ ಮೌಲ್ಯದ ಹರಳು ಕಲ್ಲು ಜೊತೆಗೆ ಆ್ಯಂಬ್ಯುಲೆನ್ಸ್ ವಾಹನ ವಶಕ್ಕೆ ಪಡೆದಿದ್ದು ಆರೋಪಿಗಳಾದ ಮಡಿಕೇರಿ ಯ ರಫಿವುಲ್ಲಾ ಖಾನ್ (55), ಎಂ.ಎಂ.ಸಿರಾಜ್ (25), ಸಿಖಂದರ್ (38), ಎಂ.ಎಂ.ಮಹಮ್ಮದ್ ಆಲಿ (35) ಇವರುಗಳನ್ನು ಬಂಧಿಸಲಾಗಿದೆ. ಮಡಿಕೇರಿ ಸಮೀಪದ ಮೇಕೇರಿ ಗ್ರಾಮದ ಸಲೀಂ ಎಂಬವರ ಗೂಡ್ಸ್ ಆಟೋದಲ್ಲಿ ಮುಖ್ಯರಸ್ತೆಗೆ ತಂದು ನಂತರ ಮಡಿಕೇರಿಯ ಸುಕ್ರು ಎಂಬವರ ಖಾಸಗಿ ಆ್ಯಂಬ್ಯುಲೆನ್ಸ್ ಬಾಡಿಗೆಗೆ ಪಡೆದು ಸಾಗಾಟ ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ರೋಗಿಗಳು ಮಲಗುವ ಜಾಗದಲ್ಲಿ ಹರಳು ಕಲ್ಲು ತುಂಬಿದ್ದು ಕುಶಾಲನಗರದ ಮಾದಾಪಟ್ಟಣ ಸರಕಾರಿ ಇಂಜಿನಿಯರಿಂಗ್ ಕಾಲೇಜು ಬಳಿ ವಾಹನ ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ ಎಂದು ವೃತ್ತ ನಿರೀಕ್ಷಕ ಕ್ಯಾತೆಗೌಡ ಮತ್ತು ಠಾಣಾಧಿಕಾರಿ ಜಗಧೀಶ್ ತಿಳಿಸಿದ್ದಾರೆ.
ಗಾಂಜಾ, ಹರಳುಕಲ್ಲು, ಮಾದಕ ವಸ್ತುಗಳ ಸಾಗಾಟದಲ್ಲಿ ಜಿಲ್ಲೆಯಲ್ಲಿ ಬೃಹತ್ ಜಾಲವೇ ಇದ್ದು, ಆ್ಯಂಬ್ಯುಲೆನ್ಸ್ ವಾಹನವನ್ನೇ ಬಳಸಿ ಕೊಂಡಿರುವದರಿಂದ ಇನ್ನೂ ಮುಂದಕ್ಕೆ ಎಲ್ಲಾ ಆ್ಯಂಬ್ಯುಲೆನ್ಸ್‍ಗಳನ್ನು ತಪಾಸಣೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಹೆಡ್‍ಕಾನ್ಸ್‍ಟೇಬಲ್ ರವೀಂದ್ರ, ಕೆ.ಪಿ.ಮಾಚಯ್ಯ, ಸುಧೀಶ್ ಕುಮಾರ್, ಚಾಲಕ ಪ್ರವೀಣ್ ಅವರುಗಳು ಪಾಲ್ಗೊಂಡಿದ್ದರು.