*ಸಿದ್ದಾಪುರ, ಡಿ. 19: ಸಮೀಪದ ವಾಲ್ನೂರು ಗ್ರಾಮದ ಕೂಡ್ಲೂರು ಚೆಟ್ಟಳ್ಳಿಯಲ್ಲಿ ನಡೆದ 20 ವರ್ಷ ವಯೋಮಿತಿಯ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಕೊಪ್ಪ ಗ್ರಾಮದ ಮಿನಿಸ್ಟರ್ ಕೋರ್ಟ್ ತಂಡ, ಕೂಡ್ಲೂರು ಚೆಟ್ಟಳ್ಳಿಯ ಜೆಡ್‍ಎಕ್ಸ್ ತಂಡ ಹಾಗೂ ಕುಶಾಲನಗರದ ರಂಜಿತ್ ಫ್ರೆಂಡ್ಸ್ ತಂಡ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ಮೂರನೇ ಸ್ಥಾನವನ್ನು ಹಂಚಿಕೊಂಡಿದೆ.
ಕೂಡ್ಲೂರು ಚೆಟ್ಟಳ್ಳಿಯ ವಿನಾಯಕ ಯುವಕ ಸಂಘ, ಕೊಡಗು ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ನಡೆದ ಬಾಲಕರ ಕಬಡ್ಡಿ ಪಂದ್ಯಾವಳಿ ಯಲ್ಲಿ ಒಟ್ಟು 32 ತಂಡಗಳು ಭಾಗವಹಿಸಿದ್ದವು.
ಇದೇ ಸಂದರ್ಭದಲ್ಲಿ ಚೆಟ್ಟಳ್ಳಿ ಗ್ರಾಮದಲ್ಲಿ ದೀನ್‍ದಯಾಳ್ ಉಪಾಧ್ಯಾಯ ಯೋಜನೆಯಡಿ ಸಂಪೂರ್ಣ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವಲ್ಲಿ ಉತಮ ಸೇವೆ ಸಲ್ಲಿಸಿದ ಸ್ಥಳೀಯ ಸೆಸ್ಕ್ ಇಲಾಖೆಯ ಜೂನಿಯರ್ ಇಂಜಿನಿಯರ್ ದಿನೇಶ್ ಅವರನ್ನು ಕ್ರೀಡಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಕ್ರೀಡಾಕೂಟವನ್ನು ಉದ್ಘಾಟಿಸಿದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಕಬಡ್ಡಿ ಆಡುವ ಮುಖಾಂತರ ಕ್ರೀಡಾಭಿ ಮಾನಿಗಳನ್ನು ರಂಜಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಅಂಚೆಮನೆ ಸುಧಿ, ರವಿ, ದೇವಯಾನಿ, ಸೀತಮ್ಮ, ಸಂಘದ ಕಾರ್ಯದರ್ಶಿ ಅಕ್ಕೇರಿ ದಯಾನಂದ, ಕಣಜಾಲು ಪೂವಯ್ಯ, ನಿಖಿಲ್, ಹೇಮಂತ್, ಹೊನ್ನಪ್ಪ, ಉಪಸ್ಥಿತರಿದ್ದರು.