ವೀರಾಜಪೇಟೆ, ಡಿ. 19: ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ನೀಡಿದ ಉತ್ತಮ ಯೋಜನೆಗಳು ಜನರಿಗೆ ತಲಪಿದ ಹಿನ್ನೆಲೆಯಲ್ಲಿ ಜನರಿಗೆ ಕಾಂಗ್ರೆಸ್ ಪಕ್ಷದ ಮೇಲೆ ಒಲವಿದೆ ಎಂದು ಮಾಜಿ ಶಾಸಕ, ವೀರಾಜಪೇಟೆ ಬ್ಲಾಕ್ ಶಕ್ತಿ ಕಾರ್ಯಕ್ರಮದ ಸಂಯೋಜಕ ಸಿ.ಎಸ್. ಅರುಣ್ ಮಾಚಯ್ಯ ಹೇಳಿದ್ದಾರೆ.
ಪುರಭವನದಲ್ಲಿ ಏರ್ಪಡಿಸ ಲಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ನೂತನ ಸದಸ್ಯರ ಸೇರ್ಪಡೆ, ನೋಂದಾವಣಿ ಹಾಗೂ ಪಕ್ಷಕ್ಕೆ ಚೈತನ್ಯ ತುಂಬುವ ಶಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಕಾರ್ಯಕ್ರ್ರಮದ ಮೂಲಕ ದಿಲ್ಲಿಯ ಪ್ರಮುಖರು ಗ್ರಾಮೀಣ ಮಟ್ಟದ ಸದಸ್ಯರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ.
ದೇಶದಲ್ಲಿ ಮೂರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಶೇ. 70 ರಷ್ಟು ಗ್ರಾಮೀಣ ಜನರು ಕಾಂಗ್ರೆಸ್ ಬೆಂಬಲಿಸಿದ್ದಾರೆ.
ಪಟ್ಟಣ ಪ್ರದೇಶಗಳಲ್ಲಿ ಮಾತ್ರ ಬಿಜೆಪಿಗೆ ಬಲವಿದೆ. ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ನೀಡಿದ ಉತ್ತಮ ಯೋಜನೆಗಳು ಜನರಿಗೆ ತಲಪಿದ ಕಾರಣ ಇಂದಿಗೂ ಕಾಂಗ್ರೆಸ್ ಮೇಲೆ ಒಲವು ಇದೆ. ಕಾಂಗ್ರೆಸ್ ಅನೇಕ ಜನಪರ ಯೋಜನೆಗಳನ್ನು ರೂಪಿಸಿ, ಬಡ ಜನರ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದೆ.
ಈಗ ಪಕ್ಷದ ಶಕ್ತಿ ಕಾರ್ಯಕ್ರಮದ ಯಶಸ್ಸಿಗೆ ವಲಯ ಅಧ್ಯಕ್ಷರು ಕಾಳಜಿ ವಹಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ನಿತ್ಯ 6 ರಿಂದ 7 ಕಾರ್ಯಕ್ರಮ ಗಳನ್ನು ಆಯೋಜಿಸಬೇಕು.
ತಾ. 30 ರೊಳಗೆ ಕಾರ್ಯಕ್ರಮ ಮುಗಿಸಬೇಕು ಎಂದು ಹೇಳಿದರು. ವೀರಾಜಪೇಟೆ, ಸೋಮವಾರ ಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವ ವಿಶ್ವಾಸವಿದ್ದು ವೀರಾಜಪೇಟೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ವಿಶ್ವಾಸವಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸ್ವಲ್ಪ ಹಿಂದೆ ಇದ್ದರೂ ಸಂಘಟನೆಯಲ್ಲಿ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿದೆ.
ಈ ಬಾರಿಯ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದೆ.
ಬಿಜೆಪಿಯನ್ನು ಬದಿಗಿಟ್ಟು ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಎಲ್ಲರೂ ಸಂಘಟಿತರಾಗಬೇಕು. ರಾಜಸ್ತಾನ, ಮಧ್ಯಪ್ರದೇಶ, ಛತ್ತಿಸ್‍ಗಡ್ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಭೂತ ಪೂರ್ವ ಗೆಲವು ಸಾಧಿಸಿರುವದು ಪಕ್ಷಕ್ಕೆ ಚೈತನ್ಯ ತಂದಿದೆ.
ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರ ಮಹತ್ವದ ಕನಸಿನ ಯೋಜನೆಯಾದ ಶಕ್ತಿಯನ್ನು ಈ ತಿಂಗಳ ಅಂತ್ಯದೊಳಗೆ ಮಾಡಿ ಮುಗಿಸುವ ಸಂಕಲ್ಪದಿಂದ ಕೆಲಸಮಾಡಬೇಕಿದೆ.
ಪ್ರತಿಯೊಂದು ಬೂತ್‍ನಲ್ಲಿ 20 ಜನ ಸದಸ್ಯರನ್ನು ನೋಂದಾಯಿಸಿ, ನಿಗದಿತ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಬೇಕು. ಅಲ್ಲಿಂದ ಸ್ವೀಕಾರದ ಸಂದೇಶ ಬರುತ್ತದೆ.
ಇದಕ್ಕೆ ಅಂಕ ಇದ್ದು ಉತ್ತಮ ಅಂಕ ಪಡೆದವರಿಗೆ ಪಕ್ಷ ಒಂದು ಮಾನ್ಯತೆ ನೀಡುತ್ತದೆ. ಆದರೆ ಯಾರ ಮೇಲೆ ಒತ್ತಡ ಬೇಡ, ಪಕ್ಷದ ಅಭಿಮಾನಿಗಳಿಂದ ಮಾತ್ರ ಸದಸ್ಯತ್ವ ನೋಂದಾಯಿಸಿ ಇಂದಿನ ಸಭೆಗೆ ಗೈರು ಹಾಜರಾದರೂ ಹಾಗೂ ಕ್ರಿಯಾಶೀಲರಲ್ಲದ ವಲಯ ಅಧ್ಯಕ್ಷರುಗಳ ವಿರುದ್ಧ ಕ್ರಮ ಕೈಗೊಂಡು ತಕ್ಷಣದಿಂದ ಬದಲಾವಣೆ ಮಾಡಲಾಗುವದು. ಮಾಜಿ ಶಾಸಕ ಅರುಣ್ ಮಾಚಯ್ಯರನ್ನು ಈ ಯೋಜನೆಯ ಸಂಯೋಜಕರಾಗಿ ನೇಮಿಸಿರುವದಾಗಿ ಶಿವು ಮಾದಪ್ಪ ಹೇಳಿದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‍ಸಲಾಂ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್, ಕಾರ್ಯದರ್ಶಿ ಶಶಿಧರನ್ ,ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್, ಪಟ್ಟಣ ಪಂಚಾಯಿತಿ ಸದಸ್ಯರಾದ ರಾಜೇಶ್, ಮೊಹ್ಮದ್ ರಾಫಿ, ಪ್ರಥ್ವಿನಾಥ್, ಅಗಸ್ಟೀನ್ ಬೆನ್ನಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.