ಕೂಡಿಗೆ,ಡಿ. 20: ಸೀಗೇಹೊಸೂರು ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಧಾಳಿಯಿಂದಾಗಿ ಇಲ್ಲಿಯ ರೈತರಿಗೆ ಭಾರೀ ನಷ್ಟವುಂಟಾಗಿದೆ.
ಮೂರು ಕಾಡಾನೆಗಳು ಬಾಣವಾರದಂಚಿನಿಂದ ಜೇನುಕಲ್ಲು ಬೆಟ್ಡದ ಮಾರ್ಗವಾಗಿ ಧಾವಿಸಿ, ಧಾಳಿ ನಡೆಸಿವೆ. ಬೆಟ್ಟದ ಸಮೀಪದ ಗ್ರಾಮಗಳಾದ ಸೀಗೇಹೊಸೂರು, ಭುವನಗಿರಿ, ಗಂಧದಹಾಡಿ ವ್ಯಾಪ್ತಿಗಳಲ್ಲಿರುವ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶಪಡಿಸಿವೆ.
ಜಮೀನಿನಲ್ಲಿ ಬೆಳೆದಿದ್ದ ಶುಂಠಿ, ಜೋಳ, ಸುವರ್ಣ ಗೆಡ್ಡೆ, ಭತ್ತ ಮುಂತಾದ ಬೆಳೆಗಳನ್ನು ನಾಶಗೊಳಿಸಿವೆ. ರೈತರಾದ ಶಂಕರ, ಕೃಷ್ಣ, ರವಿ, ಕುಶಾಲಪ್ಪ, ಗುರು, ವೆಂಕಟೇಶ, ಲಕ್ಷ್ಮಿ ಇವರುಗಳ ಜಮೀನುಗಳಿಗೆ ಭಾರೀ ನಷ್ಟವುಂಟಾಗಿವೆ.
ಸ್ಥಳಕ್ಕೆ ಕಣಿವೆಯ ಉಪವಲಯ ಅರಣ್ಯಾಧಿಕಾರಿ ಚಂದ್ರೇಶ್ ಹಾಗೂ ಸಿಬ್ಬಂದಿ ಪರಿಶೀಲಿಸಿದ್ದು, ಭಾರೀ ನಷ್ಟಕ್ಕೊಳಗಾದ ರೈತರು ತಮಗಾದ ನಷ್ಟದ ಪರಿಹಾರವನ್ನು ಒದಗಿಸುವಂತೆ ಆಗ್ರಹಿಸಿದ್ದಾರೆ.