(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಡಿ. 19: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಸಂಚರಿಸುತ್ತಿರುವ ಹಲವಾರು ಆಟೋಗಳಿಗೆ ಸಮರ್ಪಕ ದಾಖಲೆಗಳಿಲ್ಲದೆ ಹಾಗೂ ಪರವಾನಗಿಯನ್ನು ಹೊಂದಿಲ್ಲದೆ ಬಾಡಿಗೆ ನಡೆಸುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗೋಣಿಕೊಪ್ಪ ಪಟ್ಟಣದಲ್ಲಿ ಪ್ರತಿನಿತ್ಯ ಸುಮಾರು 250ಕ್ಕೂ ಅಧಿಕ ಆಟೋಗಳು ಸಂಚರಿಸುತ್ತಿದ್ದು ಇದರಲ್ಲಿ ಹಲವು ಆಟೋಗಳಿಗೆ ಸೂಕ್ತ ದಾಖಲೆಗಳಿಲ್ಲ ಹಾಗೂ ಆಟೋ ಚಾಲಕರು ಚಾಲನಾ ಪರವಾನಗಿಯೇ ಇಲ್ಲದೆ ಆಟೋ ಚಾಲನೆ ಮಾಡುತ್ತಿದ್ದಾರೆ. ಬ್ಯಾಂಕಿನಿಂದ, ಫೈನಾನ್ಸ್ ಕಂಪೆನಿಯಿಂದ ಸಿಗುವ ಸಾಲವನ್ನು ಪಡೆದುಕೊಂಡು ಆಟೋ ಖರೀದಿಸುವ ಕೆಲವರು ಸೂಕ್ತ ದಾಖಲಾತಿಗಳನ್ನು ಹೊಂದಿಸಿಕೊಳ್ಳುವಲ್ಲಿ ಇಚ್ಚಾ ಶಕ್ತಿ ತೋರುತ್ತಿಲ್ಲ. ನಿತ್ಯ ಸಾವಿರಾರು ಮಂದಿ ಆಟೋಗಳಲ್ಲಿ ಸಂಚರಿಸುತ್ತಿದ್ದು ಏನಾದರೂ ಅನಾಹುತಗಳು ಸಂಭವಿಸಿದರೆ ಅವರ ಜೀವಕ್ಕೆ ಯಾರು ಹೊಣೆ ಎಂದು ಪ್ರಶ್ನಿಸುವ ಸಮಯ ಬಂದಿದೆ.
ಸೂಕ್ತ ದಾಖಲಾತಿ ಇದ್ದರೂ ಅಪಘಾತ ಸಂಭವಿಸಿದಾಗ ಪರಿಹಾರಕ್ಕಾಗಿ ಅಲೆದಾಟ ತಪ್ಪಿದಲ್ಲ. ಆದರೆ ಪರವಾನಗಿ ಇಲ್ಲದಿದ್ದರೆ ವಿಮೆ ಸಿಗುವದಂತೂ ಕನಸಿನ ಮಾತು. ಇದೆಲ್ಲದರ ಅರಿವಿದ್ದರೂ ಕೆಲವು ಚಾಲಕರು ದಿನನಿತ್ಯ ಆಟೋ ಬಾಡಿಗೆ ಮಾಡುತ್ತಿದ್ದಾರೆ. ಒಂದು ವೇಳೆ ಅಪಘಾತ ಸಂಭವಿಸಿದಲ್ಲಿ ಇಂತಹ ಚಾಲಕನಿಂದ ಅಮಾಯಕ ಪ್ರಯಾಣಿಕರೂ ಸಮಸ್ಯೆ ಎದುರಿಸಬೇಕಾಗುತ್ತದೆ. ಪರವಾನಗಿ ರಹಿತ ಚಾಲನೆ ಶಿಕ್ಷಾರ್ಹ ಅಪರಾಧವಾಗಿದ್ದರೂ ಅನೇಕ ಮಂದಿ ಆಟೋ ಚಾಲಕರು ನಿರ್ಭಯವಾಗಿ, ಕಾನೂನಿನ ಭಯವಿಲ್ಲದೆ ಆಟೋ ಓಡಿಸುತ್ತಿದ್ದಾರೆ.
ಕೆಲವು ಆಟೋಗಳಿಗೆ ಎಫ್‍ಸಿ ಆಗಿಲ್ಲ, ಇನ್ಶೂರೆನ್ಸ್ ಪಾವತಿಸಿಲ್ಲ. ಪರ್ಮಿಟ್ ಅಂತೂ ಇಲ್ಲವೇ ಇಲ್ಲ. ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆಯಿಂದ ನೀಡುವ ಜಿಪಿಎಸ್‍ಅನ್ನು ಕೆಲವರು ಇನ್ನೂ ಪಡೆದುಕೊಂಡಿಲ್ಲ. ಆಟೋ ಚಾಲಕರ ಸಂಘದ ದೂರಿಗೆ ಸ್ಪಂದಿಸಿದ ಠಾಣಾಧಿಕಾರಿಗಳು ಸಭೆ ನಡೆಸಿ ಸೂಚನೆ ನೀಡಿದ್ದರೂ, ದಾಖಲಾತಿಗಳನ್ನು ಸರಿಪಡಿಸಿಕೊಂಡಿಲ್ಲ. ಇನ್ನು ಕೆಲವು ಆಟೋ ಚಾಲಕರು ಸಂಜೆ 7 ಗಂಟೆಯ ನಂತರ ಮದ್ಯದಂಗಡಿ, ಬಾರ್‍ಗಳ ಮುಂದೆ ಆಟೋ ನಿಲ್ಲಿಸಿ ಮುಂಜಾನೆಯಿಂದ ದುಡಿದ ಹಣವನ್ನು ಹೆಂಡಕ್ಕಾಗಿ ಸುರಿಯುತ್ತಿದ್ದಾರೆ. ನಂತರ ಕುಡಿದ ಅಮಲಿನಲ್ಲಿಯೇ ಆಟೋ ಚಾಲನೆ ಮಾಡುತ್ತಾರೆ.
ನಿಗದಿತ ದರಕ್ಕಿಂತ ದುಪ್ಪಟ್ಟು ದರವನ್ನು ಅಮಾಯಕ ಪ್ರಯಾಣಿಕರಿಂದ ವಸೂಲಿ ಮಾಡುತ್ತಿರುವ ಬಗ್ಗೆಯೂ ಆರೋಪ ಕೇಳಿಬಂದಿದೆ. ಕೆಲವು ಆಟೋ ಚಾಲಕರು ಬಾಡಿಗೆಗೆ ಬಾರದೇ ಉಡಾಫೆಯ ಮಾತು ಆಡುವ ಬಗ್ಗೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಆಟೋ ಮಾಲೀಕರ ಹಾಗೂ ಚಾಲಕರ ಸಂಘವು ಸೂಕ್ತ ದಾಖಲಾತಿಗಳಿಲ್ಲದೆ ರಾಜಾರೋಷವಾಗಿ ಆಟೋ ಚಲಾಯಿಸುತ್ತಿರುವ ಬಗ್ಗೆ ಗೋಣಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡರೆ ಮಾತ್ರವೇ ಇವುಗಳಿಗೆ ಕಡಿವಾಣ ಹಾಕಲು ಸಾಧ್ಯ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಅನಧಿಕೃತ ಆಟೋಗಳಿಗೆ, ಪರವಾನಗಿ ಪಡೆಯದ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.