ಕೂಡಿಗೆ, ಡಿ. 19 : ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿದ್ದವರಿಗೆ ವಿತರಿಸಲು ಸರ್ಕಾರ ನೀಡಿದ್ದ ವಿಶೇಷ ಅನ್ನಭಾಗ್ಯ ಯೋಜನೆಯ ಉಚಿತ ಆಹಾರ ಕಿಟ್‍ಗಳು ಸಂತ್ರಸ್ತರಿಗೆ ವಿತರಣೆಯಾಗದೆ ಮುಳ್ಳುಸೋಗೆ ಗ್ರಾಮ ಪಂಚಾಯ್ತಿಯ ಕೊಠಡಿಯೊಂದರಲ್ಲಿ ಬಿದ್ದಿವೆ. ಈಗಾಗಲೇ ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಸಂತ್ರಸ್ತರಿಗೆ ಹಾಗೂ ನ್ಯಾಯಬೆಲೆ ಅಂಗಡಿಯ ಮುಖಾಂತರ ಪಡಿತರ ವಸ್ತುಗಳನ್ನು ಪಡೆಯುವ ಎಲ್ಲಾ ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. ಇನ್ನುಳಿದ 50ಕ್ಕೂ ಹೆಚ್ಚು ವಿಶೇಷ ಅನ್ನಭಾಗ್ಯ ಯೋಜನೆಯ ಕಿಟ್‍ಗಳು ಹಾಗೂ ಅಡುಗೆ ಎಣ್ಣೆಗಳು ಪಂಚಾಯ್ತಿಯ ಮೂಲೆಯಲ್ಲಿ ಬಿದ್ದಿವೆ.
ಆಹಾರ ಇಲಾಖೆಯವರು ಇವುಗಳನ್ನು ಇತ್ತ ಪಡಿತರದಾರರಿಗೂ ವಿತರಣೆ ಮಾಡದಿರುವದರಿಂದ ಆಹಾರ ಸಾಮಗ್ರಿಗಳು ಹುಳು ಹಿಡಿಯುವ ಹಂತದಲ್ಲಿವೆ. ಈ ಆಹಾರ ಕಿಟ್‍ನಲ್ಲಿ ಅಕ್ಕಿ, ಸಕ್ಕರೆ, ಉಪ್ಪು, ಬೇಳೆಕಾಳು ಇದ್ದು, ಕಾಳುಗಳಿಗೆ ಹುಳು ಹಿಡಿದಿವೆ. ವಿಶೇಷ ಪ್ಯಾಕ್‍ನಲ್ಲಿ ಇಂತಿಷ್ಟು ದಿನಗಳು ಇಡುವ ವ್ಯವಸ್ಥೆಯಿರುವದಿಲ್ಲ. ಇದೀಗ ಉಪಯೋಗಿಸುವಂತಿಲ್ಲ. ಇತ್ತ ಬಿಸಾಡುವಂತಿಲ್ಲ ಎಂಬಂತಾಗಿದೆ. ಆದರೆ, ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕಾರ್ಡುದಾರರಿಗೆ ವಿತರಿಸಿ ಹೆಚ್ಚುವರಿಯಾಗಿರುವದನ್ನು ಹಿಂತೆಗೆದುಕೊಂಡು ಹೋಗಲು ಆಹಾರ ಇಲಾಖೆಯವರಿಗೆ ತಿಳಿಸಿದರೂ ಇದುವರೆಗೂ ತೆಗೆದುಕೊಂಡು ಹೋಗಿ ಬೇರೆಡೆಗೆ ವಿತರಣೆ ಮಾಡದೆ ಇರುವದರಿಂದ ಈ ವಸ್ತುಗಳು ಅನುಪಯುಕ್ತ ಆಹಾರ ವಸ್ತುಗಳಾಗಿವೆ.
ಸಂಬಂಧಪಟ್ಟ ಇಲಾಖೆಯವರು ಇದನ್ನು ಸರಿಪಡಿಸುವಲ್ಲಿ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೆಲ ದಿನಗಳು ಕಳೆದಲ್ಲಿ ಮೂಲೆಯಲ್ಲಿ ಬಿದ್ದಿರುವ ಅನ್ನಭಾಗ್ಯ ಯೋಜನೆಯ ಕಿಟ್‍ಗಳಲ್ಲಿರುವ ಹುಳುಗಳು ಗ್ರಾಮದೊಳಗೆ ಹರಿದಾಡುವ ರೀತಿಯಲ್ಲಿವೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಈ ಬಗ್ಗೆ ಪ್ರತಿಕ್ರಿಯಿಸಿ ಸಂತ್ರಸ್ತರಿಗೆ ಆಹಾರ ಇಲಾಖೆಯ ವತಿಯಿಂದ ವಿಶೇಷ ಅನ್ನಭಾಗ್ಯ ಯೋಜನೆಯ ಕಿಟ್‍ಗಳನ್ನು ನೀಡಲಾಗಿದೆ. ಇನ್ನುಳಿದ ಕಿಟ್‍ಗಳನ್ನು ಆಹಾರ ಇಲಾಖೆಯವರಿಗೆ ಪತ್ರವ್ಯವಹರಿಸಿ ತೆಗೆದುಕೊಂಡು ಹೋಗಲು ತಿಳಿಸಲಾಗಿದೆ ಎಂದಿದ್ದಾರೆ.
-ಕೆ.ಕೆ.ನಾಗರಾಜಶೆಟ್ಟಿ