ಮಡಿಕೇರಿ, ಡಿ. 19: ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ವಿಳಂಬವಾಗಿಯಾದರೂ ಧರ್ಮಕ್ಕೆ ಜಯ ಖಚಿತ ಎಂದು ಆರ್ಟ್ ಆಫ್ ಲಿವಿಂಗ್‍ನ ಸ್ವಾಮಿ ಸೂರ್ಯಪಾದ ನುಡಿದರು.

ಅವರು ಇಂದು ಸಂಜೆ ಓಂಕಾರ ಸದನದಲ್ಲಿ ಶ್ರೀರಾಮಾಂಜನೇಯ ಭಜನಾ ಮಂಡಳಿ, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯೊಂದಿಗೆ ಏರ್ಪಡಿಸಿದ ‘ಗೀತಾ ಜಯಂತಿ’ ಕಾರ್ಯಕ್ರಮದಲ್ಲಿ ಮಾತು ಮತ್ತು ಭಜನೆಯ ಮೂಲಕ ಜೀವನ ಮಾರ್ಗದ ಕುರಿತು ತಿಳಿಸಿದರು.

ನಡುನಡುವೆ ಭಜನೆಯ ಮೂಲಕ ಸಭಿಕರನ್ನು ಸೆರೆಹಿಡಿದ ಅವರು, ಭಾಗವತ, ಭಗವದ್ಗೀತೆ, ಕೃಷ್ಣನ ಪಾತ್ರ, ಜೀವನದ ಮೌಲ್ಯಗಳ ಕುರಿತು ಮನಮುಟ್ಟುವಂತೆ ಮಾತನಾಡಿದರು.

ಎಲ್ಲಿ ನಾರಾಯಣ ಸ್ಮರಣೆ ನಡೆಯುತ್ತದೊ, ಅಲ್ಲೇ ವೈಕುಂಠ ಎಂದು ಒತ್ತಿ ನುಡಿದ ಅವರು, ಭಗವದ್ಗೀತೆಯ ಶ್ಲೋಕಗಳನ್ನು ಅರ್ಥೈಸಿಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಕುರುಕ್ಷೇತ್ರ ಯುದ್ಧಾರಂಭದಲ್ಲಿ ಧರ್ಮರಾಯನು ಶತ್ರು ಸೇನೆಯೆಡೆ ತೆರಳಿ, ಹಿರಿಯರಾದ ಭೀಷ್ಮಾಚಾರ್ಯ, ದ್ರೋಣ ಮತ್ತು ಕೃಪಾಚಾರ್ಯರಿಗೆ ನಮಸ್ಕರಿಸಿ ಆಶೀರ್ವಾದ ಕೇಳಿದ ಮನೋಜ್ಞ ಘಟನೆ, ಧರ್ಮಯುದ್ಧ ಇಂದಿನ ಸಮಾಜ ಅರಿಯಬೇಕು ಎಂದರು.

ಭಗವದ್ಗೀತೆಯನ್ನು ವಿಶ್ವಕೋಷ ಎಂದು ಕರೆದ ಅವರು, ಅದರ ಒಕ್ಕಣೆ ಕೈಗೆಟುಕದೆಂಬ ಭ್ರಮೆ ನಮ್ಮಲ್ಲಿದೆ ಎಂದ ಅವರು, ಜೀವನದಲ್ಲಿ ಪ್ರತಿ ಪ್ರಶ್ನೆಗೆ ಅದರಲ್ಲಿ ಉತ್ತರವಿದೆ. ಆದರೆ ಅದನ್ನು ಸಮರ್ಥವಾಗಿ ಅರಿಯುವ-ತಿಳಿಸುವ ಕೆಲಸ ಸಮಾಜದಲ್ಲಿ ಆಗುತ್ತಿಲ್ಲ ಎಂದು ವಿಷಾಧಿಸಿದರು. ಸತ್ಯದ ಅನುಸಂಧಾನ ಗುರುವಿನ ಮೂಲಕ ಸಾಧ್ಯ ಎಂದು ಅವರು ದೈವತ್ತ್ವದಲ್ಲಿ ಶ್ರದ್ಧೆ ಮತ್ತು ನಂಬಿಕೆಯ ಮೂಲಕ ಗುರಿ ತಲಪಬಹುದೆಂದರು.

ಆರ್ಟ್ ಆಫ್ ಲಿವಿಂಗ್‍ನ, ಸ್ಥಳೀಯ ಅನುಯಾಯಿ ವಕೀಲ ಕೆ.ಡಬ್ಲ್ಯೂ. ಬೋಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಪ್ರಸಾದ್‍ಜಿ, ಪ್ರತಿಭಾಜಿ ಹಾಗೂ ಸಂಗೀತ ತಂಡ ಉಪಸ್ಥಿತರಿದ್ದರು.