ಕುಶಾಲನಗರ, ಡಿ. 19: ಸ್ವಚ್ಛತೆಯ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಸಿಂಗಾಪುರಕ್ಕೆ ತೆರಳಿದ್ದ ಕುಶಾಲನಗರ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಾದ ಎನ್. ಗಣೇಶ್ ಮತ್ತು ಕೆ. ರಘು ಮರಳಿ ತಾಯ್ನಾಡಿಗೆ ಹಿಂತಿರುಗಿದ್ದಾರೆ. ರಾಜ್ಯ ಸರಕಾರದ ವಿಶೇಷ ಯೋಜನೆಯಡಿ ಸಿಂಗಾಪುರದಲ್ಲಿ ಪರಿಸರ ಸ್ವಚ್ಛತಾ ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ನಡೆಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ತೆರಳಿದ್ದ 35 ಮಂದಿಯ ತಂಡ ವಿದೇಶ ಪ್ರವಾಸದಿಂದ ಮರಳಿದ್ದಾರೆ.

ಜಿಲ್ಲೆಯಿಂದ 2ನೇ ಹಂತದಲ್ಲಿ ಕುಶಾಲನಗರದ ಇಬ್ಬರು ಪೌರಕಾರ್ಮಿಕರು ತೆರಳಿದ್ದು ಹೊಸ ಅನುಭವದೊಂದಿಗೆ ಮರಳಿ ಬಂದ ಕಾರ್ಮಿಕರು ಅಲ್ಲಿನ ತಂತ್ರಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಲ್ಲೆಲ್ಲೂ ನೋಡಿದರೂ ಸಿಸಿ ಕ್ಯಾಮೆರಾ ಕಣ್ಗಾವಲು, ಅಶುಚಿತ್ವಕ್ಕೆ ಅವಕಾಶ ಇರುವದಿಲ್ಲ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಸಿಂಗಾಪುರ ದೇಶದ ಮಾದರಿಯಲ್ಲಿ ನಮ್ಮ ಪಟ್ಟಣಗಳು ಕಾರ್ಯ ಯೋಜನೆ ರೂಪಿಸಬೇಕಾಗಿದೆ ಎನ್ನುತ್ತಾರೆ ಫಾರಿನ್ ರಿಟರ್ನ್ಡ್ ರಘು ಮತ್ತು ಗಣೇಶ್. ಕಸವನ್ನು ಗೊಬ್ಬರವಾಗಿ ಪರಿವರ್ತಿಸುವದರೊಂದಿಗೆ ಕಸದ ಸಮಸ್ಯೆಗೆ ಪರಿಹಾರ ಕಂಡುಹಿಡಿದಿರುವ ಬಗ್ಗೆ ಮಾಹಿತಿಗಳನ್ನು ತಾವು ಪಡೆದಿದ್ದು ವಿದೇಶ ಪ್ರವಾಸ ತುಂಬಾ ಒಳ್ಳೆಯ ಅನುಭವ ನೀಡಿದೆ. ತಮ್ಮ ಅನುಭವವನ್ನು ಇತರ ಸಹದ್ಯೋಗಿಗಳೊಂದಿಗೆ ಹಂಚುವ ಮೂಲಕ ಕುಶಾಲನಗರ ಪಟ್ಟಣವನ್ನು ಸ್ವಚ್ಛ ಕುಶಾಲನಗರವನ್ನಾಗಿ ಪರಿವರ್ತಿಸಲು ಪ್ರಯತ್ನಿಸುವದಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.