ಕುಶಾಲನಗರ, ಡಿ. 21: ಕುಶಾಲನಗರದ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷೆ ಸಲೀನ ಡಿಕುನ್ನಾ ಅಧ್ಯಕ್ಷತೆಯಲ್ಲಿ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯಿತಿ ಸದಸ್ಯ ಅಮೃತ್‍ರಾಜ್ ಚಾಲನೆ ನೀಡಿದರು. ನಂತರ ಮಾತನಾಡಿದ ಅಮೃತ್‍ರಾಜ್, ದೈನಂದಿನ ಒತ್ತಡದ ನಡುವೆ ದೈಹಿಕ ಆರೋಗ್ಯ ಸುಧಾರಣೆ ಕುಂಠಿತವಾಗುತ್ತಿದೆ. ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ಕುಟುಂಬದಲ್ಲಿ ಪ್ರತಿಯೊಬ್ಬರೂ ಆರೋಗ್ಯವಾಗಿದ್ದಲ್ಲಿ ಸ್ವಸ್ಥ ಕುಟುಂಬ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು. ಸರಕಾರಿ ವೈದ್ಯ ಡಾ. ಭರತ್ ಶಾಲಾ ಮಕ್ಕಳು ಮತ್ತು ಪೋಷಕರಿಗೆ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯ ಸುಧಾರಣೆ ಬಗ್ಗೆ ಮಾಹಿತಿ ಒದಗಿಸಿದರು. ಪ.ಪಂ. ಸದಸ್ಯರಾದ ರೂಪಾ ಉಮಾಶಂಕರ್, ಸಂಘದ ಉಪಾಧ್ಯಕ್ಷೆ ಸುಶೀಲಾ, ನಿರ್ದೇಶಕರಾದ ಕಮಲ ಕರಿಯಪ್ಪ, ಜಯ ಇದ್ದರು.