ಶ್ರೀಮಂಗಲ, ಡಿ. 21: ಕುಟ್ಟದಿಂದ ಟಿ. ಶೆಟ್ಟಿಗೇರಿವರೆಗೆ ಮುಖ್ಯ ರಸ್ತೆ ಗುಂಡಿ ಬಿದ್ದಿದ್ದು ಇದನ್ನು ಕೂಡಲೇ ದುರಸ್ತಿಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ಪೊನ್ನಂಪೇಟೆಯಿಂದ ಟಿ.ಶೆಟ್ಟಿಗೇರಿ ಸಮೀಪ ಬೆಳ್ಳೂರುವರೆಗೆ ರಸ್ತೆಯ ಗುಂಡಿ ಮುಚ್ಚಲಾಗಿದೆ. ಈ ಕಾಮಗಾರಿಯನ್ನು ಕುಟ್ಟದವರೆಗೆ ಮುಂದುವರೆಸದೆ ಇರುವದು ಸರಿಯಲ್ಲವೆಂದು ಶ್ರೀಮಂಗಲದ ಛೇಂಬರ್ ಆಫ್ ಕಾಮರ್ಸ್‍ನ ಕೊಳೇರ ಬಾಬು ಹೇಳಿದ್ದಾರೆ.
ರಸ್ತೆ ಗುಂಡಿ ಬಿದ್ದಿರುವದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಂತರಾಜ್ಯ ಹೆದ್ದಾರಿಯಾಗಿರುವದರಿಂದ ವಾಹನಗಳ ಸಂಚಾರ ಹೆಚ್ಚಾಗಿದೆ. ಲೋಕೋಪಯೋಗಿ ಇಲಾಖೆ ಈ ಬಗ್ಗೆ ತುರ್ತಾಗಿ ಸ್ಪಂದಿಸಬೇಕೆಂದು ಬಾಬು ಒತ್ತಾಯಿಸಿದರು.
ಈ ಬಗ್ಗೆ ಲೊಕೋಪಯೋಗಿ ಇಲಾಖೆಯ ಇಂಜಿನಿಯರನ್ನು ಸಂಪರ್ಕಿಸಿದಾಗ ಈ ರಸ್ತೆಯ ದುರಸ್ತಿಗೆ ಟೆಂಡರ್ ಪ್ರಕ್ರಿಯೆಯಲ್ಲಿದ್ದು ಒಂದು ವಾರದೊಳಗೆ ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದ್ದಾರೆ.