ಮಡಿಕೇರಿ, ಡಿ., 21: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಎದುರಾದ ಪ್ರವಾಹ ಹಾಗೂ ಭೂಕುಸಿತದಿಂದ ಅಂದಾಜು ರೂ. 1785.03 ಕೋಟಿ ಹಾನಿ ಸಂಭವಿಸಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು, ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ. ಜಿಲ್ಲೆಯಲ್ಲಿ 2568 ಮನೆಗಳ ಹಾನಿಯೊಂದಿಗೆ, 805 ಕಿ.ಮೀ. ರಸ್ತೆ, 1792 ಕಿ.ಮೀ. ಗ್ರಾಮೀಣ ರಸ್ತೆ, ಸೇತುವೆ ಇತ್ಯಾದಿ 124 ಹಾಗೂ 140 ನೀರಾವರಿ ಘಟಕಗಳಿಗೆ ಹಾನಿಯಾಗಿರುವದಾಗಿ ಸಚಿವರು ವಿವರಿಸಿದ್ದಾರೆ.ಅಲ್ಲದೆ 102063 ಹೆಕ್ಟೇರ್ ಕಾಫಿ, 6175 ಹೆಕ್ಟೇರ್ ಏಲಕ್ಕಿ, 11838 ಹೆಕ್ಟೇರ್ ತೋಟಗಾರಿಕಾ ಬೆಳೆ, 9075 ಹೆಕ್ಟೇರ್ ಕೃಷಿ ಬೆಳೆ ನಾಶ ಸಂಭವಿಸಿದ್ದು, 551.43 ಹೆಕ್ಟೇರ್ ಭೂಕುಸಿತದೊಂದಿಗೆ 411 ಹೆಕ್ಟೇರ್ ಗದ್ದೆಗಳಲ್ಲಿ ಹೂಳು ತುಂಬಿಕೊಂಡಿದೆ ಎಂದು ಅಂಕಿ ಅಂಶ ನೀಡಿದ್ದಾರೆ.ಸರ್ಕಾರದಿಂದ ಕೈಗೊಂಡ ಕ್ರಮಗಳು: ಕೊಡಗು ಜಿಲ್ಲಾಡಳಿವು ಶೋಧನಾ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಭಾರತೀಯ ಸೇನೆ, ನೌಕಾದಳ, ವಾಯುಸೇನೆ, ಎನ್‍ಡಿಆರ್‍ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ, ಎಸ್‍ಡಿಆರ್‍ಎಫ್, ಸಿವಿಲ್ ಡಿಫೆನ್ಸ್, ಗೃಹರಕ್ಷಕ ದಳ, ಎನ್‍ಸಿಸಿ ಹಾಗೂ ಇತರೆ ಸರ್ಕಾರೇತರ ಸಹಾಯದಿಂದ 4450 ನಿರಾಶ್ರಿತರನ್ನು ರಕ್ಷಿಸಲಾಗಿದೆ.

ರೂ.25 ಕೋಟಿ ಬಿಡುಗಡೆ: ಜಿಲ್ಲೆಯಲ್ಲಿ 50 ಗಂಜಿ ಕೇಂದ್ರಗಳನ್ನು ತೆರೆದು ಅದರಲ್ಲಿ 6086 ಜನರಿಗೆ ಆಹಾರ ಮತ್ತು ತಾತ್ಕಾಲಿಕ ವಸತಿಯನ್ನು ಮಾಡಲಾಗಿದೆ. ಪ್ರಸ್ತುತ 7 ಗಂಜಿಕೇಂದ್ರಗಳಲ್ಲಿ 515 ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವಾಹ ಪರಿಹಾರ ಕಾರ್ಯಗಳಿಗೆ ಕೊಡಗು ಜಿಲ್ಲೆಗೆ ರೂ. 25 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

20 ಸಾವು: ಕೊಡಗು ಪ್ರವಾಹದಿಂದ ಮೃತಪಟ್ಟಿರುವ 20 ಪ್ರಕರಣಗಳಿಗೆ ತಲಾ ರೂ. 7 ಲಕ್ಷಗಳಂತೆ ಮರಣ ಹೊಂದಿದವರ ವಾರಿಸುದಾರರಿಗೆ ಪಾವತಿಸಲಾಗಿದೆ. (ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್) ಮಾರ್ಗಸೂಚಿಯಂತೆ ರೂ. 4 ಲಕ್ಷ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ. 1 ಲಕ್ಷ ಹಾಗೂ ಪ್ರಧಾನ ಮಂತ್ರಿ ಪರಿಹಾರ

(ಮೊದಲ ಪುಟದಿಂದ) ನಿಧಿಯಿಂದ ರೂ. 2 ಲಕ್ಷ ಹಾಗೂ ಒಟ್ಟು ರೂ. 7 ಲಕ್ಷದಂತೆ ವಿತರಿಸಲಾಗಿದೆ.

ಜಿಲ್ಲೆಯ ನೆರೆಹಾವಳಿಯಿಂದ ಮನೆ ಹಾನಿಯಾದ ಬಾಧಿತ ಕುಟುಂಬಗಳು ಗೃಹೋಪಯೋಗಿ ಸಲಕರಣೆಗಳನ್ನು ಖರೀದಿಸಲು ರೂ. 3,800 ಸೇರಿದೆ. ಹೆಚ್ಚುವರಿಯಾಗಿ ತಲಾ ರೂ. 50,000 ವಿಶೇಷ ಅನುದಾನ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪಾವತಿಸ ಲಾಗುತ್ತಿದೆ. ಪ್ರವಾಹದಿಂದ ಉಂಟಾಗಿರುವ ಮನೆ ಹಾನಿಯ ಪ್ರಮಾಣಕ್ಕೆ ಅನುಗುಣವಾಗಿ ಪರಿಹಾರ ವಿತರಿಸಲಾಗುತ್ತಿದೆ. ಶೇ. 15 ರಷ್ಟು ಮನೆ ಹಾನಿಯಾದಲ್ಲಿ ರೂ. 5,200 ಹಾಗೂ ಪೂರ್ಣ ಮನೆಹಾನಿ ಯಾದಲ್ಲಿ ರೂ. 95,100 ಮತ್ತು ರೂ. 1,01,900 (ಗುಡ್ಡಗಾಡು ಪ್ರದೇಶ) ಶೇ. 75 ರಷ್ಟು ಮನೆಹಾನಿಯಾದ ಪ್ರಕರಣಗಳನ್ನು ಪೂರ್ಣ ಮನೆ ಹಾನಿಯೆಂದು ಪರಿಗಣಿಸಿ ಪಾವತಿಸಲಾಗುತ್ತಿದೆ.

ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು 840 ಮನೆಗಳ ನಿರ್ಮಾಣಕ್ಕಾಗಿ ಪ್ರತಿ ಮನೆಗೆ ರೂ. 9.85 ಲಕ್ಷಗಳ ಅಂದಾಜು ವೆಚ್ಚದಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ರೂ. 82.74 ಕೋಟಿ ಹಾಗೂ ಬಡಾವಣೆಗಳು ಮತ್ತು ಸಂಪರ್ಕ ರಸ್ತೆ ಹಾಗೂ ಮೂಲಭೂತ ಸೌಕರ್ಯ ಗಳನ್ನು ನಿರ್ಮಿಸಲು ರೂ. 31.63 ಕೋಟಿಗಳನ್ನು ವಸತಿ ಇಲಾಖೆಯಿಂದ ಮಂಜೂರಾತಿ ನೀಡಿದೆ. ನಿರಾಶ್ರಿತರಾದ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುವವರೆಗೆ ಬಾಡಿಗೆ ಮನೆಯಲ್ಲಿ ವಾಸ ಮಾಡಲು ಪ್ರತೀ ತಿಂಗಳು ರೂ. 10,000 ಪಾವತಿಸಲು ವಸತಿ ಇಲಾಖೆಯಿಂದ ಮಂಜೂರಾತಿ ನೀಡಿದೆ ಎಂದು ಉತ್ತರ ನೀಡಲಾಗಿದೆ.