ಮಡಿಕೇರಿ, ಡಿ. 21: ಕೊಡಗಿನಲ್ಲಿ ಪ್ರಾಕೃತಿಕ ಹಾನಿಯಿಂದ ದೈನಂದಿನ ಬದುಕಿನಲ್ಲಿ ತೊಂದರೆಗೆ ಒಳಗಾಗಿರುವ ಕುಟುಂಬಗಳು ಆತ್ಮಸ್ಥೈರ್ಯ ಕಳೆದುಕೊಳ್ಳದೆ, ಪರ್ಯಾಯ ಬದುಕು ಕಂಡುಕೊಳ್ಳುವಂತೆ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಶ್ರೀ ಬೋಧ ಸ್ವರೂಪಾನಂದ ಮಹಾರಾಜ್ ಕರೆ ನೀಡಿದರು.
ಮಾದಾಪುರ ಹಾಗೂ ಸೂರ್ಲಬ್ಬಿ ವ್ಯಾಪ್ತಿಯ ಸಂತ್ರಸ್ತರ ಕುಟುಂಬಗಳಿಗೆ ಮತ್ತು ಸೂರ್ಲಬ್ಬಿ ಶಾಲಾ ಮಕ್ಕಳಿಗೆ ದೈನಂದಿನ ವಸ್ತುಗಳ ಕಿಟ್ ವಿತರಿಸಿ ಮಾತನಾಡಿದ ಸ್ವಾಮೀಜಿ, ಯಾವದೇ ಕಾರಣಕ್ಕೂ ಹುಟ್ಟೂರು ತೊರೆಯುವಂತಹ ನಿರ್ಧಾರ ಬಿಟ್ಟು, ಇರುವಲ್ಲೇ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಮಠದಿಂದ ಸಹಕಾರ ನೀಡುವದಾಗಿ ಭರವಸೆ ನೀಡಿದರು.
ಗ್ರಾಮೀಣ ಜನತೆ ತರಕಾರಿ, ಹಣ್ಣು ಇತ್ಯಾದಿ ಬೆಳೆಯುವ ಮೂಲಕ; ಸಾವಯವ ಗೊಬ್ಬರ ಬಳಕೆಯಿಂದ ರೋಗ ರಹಿತ ಜೀವನ ಸಾಧ್ಯವಿದೆ ಎಂದು ತಿಳಿ ಹೇಳಿದರು. ಹೊಲಿಗೆ, ಜೇನುಕೃಷಿ, ಚಾಲನಾ ತರಬೇತಿ, ವೈದ್ಯಕೀಯ ನೆರವು ಕೊಡಿಸುವದಾಗಿ ನುಡಿದ ಅವರು, ಆತ್ಮವಿಶ್ವಾಸ ಮತ್ತು ಆರೋಗ್ಯಪೂರ್ಣ ಜೀವನ ಉತ್ತಮ ಬದುಕಿಗೆ ಸಹಕಾರಿ ಎಂದು ನೆನಪಿಸಿದರು.
ಆ ದಿಸೆಯಲ್ಲಿ ಪೊನ್ನಂಪೇಟೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ಅರಣ್ಯ ಕಾಲೇಜಿನ ಮುಖಾಂತರ ಅಗತ್ಯ ಸಹಕಾರ ಕೊಡಿಸುವದರೊಂದಿಗೆ, ಮಠದಿಂದ ಸಾಧ್ಯವಾಗುವ ಎಲ್ಲಾ ನೆರವು ನೀಡುವದಾಗಿ ಭರವಸೆಯಿತ್ತರು. ಮಠದ ಅನುಯಾಯಿಗಳಾದ ಡಾ. ಚಿರಂತನ್ ಹಾಗೂ ಡಾ. ದೀರಜ್ ಮತ್ತು ಸುಬೋದ್ ರಾವ್ ಸೇರಿದಂತೆ ಶರತ್, ಮಾನಸರಾಯ್ ಹಾಗೂ ಆಯ ಗ್ರಾಮಗಳ ಮುಖಂಡರು, ಸಂತ್ರಸ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.