ಮಡಿಕೇರಿ, ಡಿ.21 : ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯ ಶ್ರೀ ಅಗಸ್ತ್ಯೇಶ್ವರ ದೇಗುಲದಲ್ಲಿರುವ ಭಗ್ನ ಲಿಂಗವನ್ನು ತಮಿಳುನಾಡಿನ ಪೂಂಪುಹಾರ್‍ನ ಸಮುದ್ರದಲ್ಲಿ ವಿಸರ್ಜನೆ ಮಾಡಬೇಕೆನ್ನುವ ಪ್ರಸ್ತಾಪ ಇತ್ತೀಚೆಗೆ ವ್ಯಕ್ತವಾಗಿದ್ದು, ಇದನ್ನು ತೀವ್ರವಾಗಿ ವಿರೋಧಿಸುವದಾಗಿ ಭಾಗಮಂಡಲ ಮತ್ತು ತಲಕಾವೇರಿ ವ್ಯಾಪ್ತಿಯ ಭಕ್ತಾದಿಗಳು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುದುಕುಳಿ ಭರತ್, ತಲಕಾವೇರಿಯಲ್ಲಿ ಕುಂಡಿಕೆ ತೀರ್ಥ ಪೂಜೆಯನ್ನು ಸ್ಥಗಿತಗೊಳಿಸಿರುವದು ಮತ್ತು ಅಗಸ್ತ್ಯ ಲಿಂಗವನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಬೇಕೆನ್ನುವ ವಿಚಾರಕ್ಕೆ ಸ್ಥಳೀಯರ ವಿರೋಧವಿದೆ ಎಂದು ತಿಳಿಸಿದರು. 2004ರಲ್ಲಿ ತಲಕಾವೇರಿಯಲ್ಲಿ ಕ್ಷೇತ್ರದ ಅಂದಿನ ತಂತ್ರಿಗಳಾಗಿದ್ದ ದಿವಂಗತ ನೀಲೇಶ್ವರ ಪದ್ಮನಾಭ ತಂತ್ರಿಗಳ ಮೂಲಕ ಅಷ್ಟಬಂಧ ಬ್ರಹ್ಮಕಲಶ ಕಾರ್ಯಕ್ರಮ ನಡೆದಿತ್ತು. ಆ ಸಂದರ್ಭ ಅಗಸ್ತ್ಯ ಮುನಿಗಳು ಸ್ಥಾಪಿಸಿದ ಲಿಂಗವನ್ನು ಜಲವಾಸದಲ್ಲಿಟ್ಟು, ಅಷ್ಟಬಂಧ ಬ್ರಹ್ಮಕಲಶ ನೆರವೇರಿಸ ಲಾಗಿದೆ.

ಮುಜರಾಯಿ ಆಯುಕ್ತರು ಮತ್ತು ಮುಜರಾಯಿ ಇಲಾಖೆಯ ಪಂಡಿತರು ತಲಕಾವೇರಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾಪನೆಯ ಅಗತ್ಯವಿಲ್ಲ. ಯಾವದೇ ದೇವಾಲಯಗಳಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಮಾತ್ರ ಅಷ್ಟಬಂಧ ಬ್ರಹ್ಮಕಲಶ ಉತ್ಸವ ಮಾಡುವದು ಸಂಪ್ರದಾಯವೆಂದು ತಿಳಿಸಿದ್ದಾರೆ. ಆದರೆ, ಈಗಿನ ಭಾಗಮಂಡಲ, ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಎರಡು ಬಾರಿ ಕ್ಷೇತ್ರದ ಬಗ್ಗೆ ಪ್ರಶ್ನೆಯನ್ನು ಇರಿಸಿದ್ದು, ಈ ಸಂದರ್ಭ ದ್ವಂದ್ವ ನಿಲುವುಗಳನ್ನು ತೆಗೆದುಕೊಂಡ ಕಾರಣದಿಂದ ಭಕ್ತವಲಯದಲ್ಲಿ

(ಮೊದಲ ಪುಟದಿಂದ) ಗೊಂದಲ ಸೃಷ್ಟಿಯಾಗಿದೆ. ಪ್ರಶ್ನೆಯಲ್ಲಿ ಅಗಸ್ತ್ಯ ಮುನಿಗಳು ಸ್ಥಾಪಿಸಿದ ಲಿಂಗವನ್ನು ಪೂಂಪುಹಾರ್‍ನ ಸಮುದ್ರದಲ್ಲಿ ವಿಸರ್ಜಿಸುವ ಕುರಿತು ವಿಷಯ ಪ್ರಸ್ತಾಪವಾಗಿದೆ. ಇದು ಅತ್ಯಂತ ಖಂಡನೀಯ ಕ್ರಮವಾಗಿದ್ದು, ಸಮಿತಿಯ ಧೋರಣೆಯನ್ನು ವಿರೋಧಿಸುವದಾಗಿ ಭರತ್ ಹೇಳಿದರು.

ತಾ.26 ರಂದು ವಿರೋಧಿಸುತ್ತೇವೆ

ಗೊಂದಲ ನಿವಾರಣೆಗಾಗಿ ಡಿ.26 ರಂದು ಮತ್ತೆ ಪ್ರಶ್ನೆ ಕಾರ್ಯಕ್ರಮವನ್ನು ಸಮಿತಿ ಆಯೋಜಿಸಿದ್ದು, ಈ ಸಂದರ್ಭ ಸ್ಥಳೀಯ ಭಕ್ತರು ಹಾಜರಿರುವದಾಗಿ ತಿಳಿಸಿದ ಅವರು, ಒಂದು ವೇಳೆ ಲಿಂಗ ವಿಸರ್ಜನೆಗೆ ನಿರ್ಧಾರ ಕೈಗೊಂಡರೆ ವಿರೋಧ ವ್ಯಕ್ತಪಡಿಸುವದಾಗಿ ಹೇಳಿದರು.

ಶತಮಾನಗಳಿಂದಲು ಕಾವೇರಿ ಕುಂಡಿಕೆಯಲ್ಲಿ ಕುಂಕುಮಾರ್ಚನೆ ಪೂಜೆ ನಡೆಸಲಾಗುತ್ತಿತ್ತು. ಆದರೆ, ಈಗಿನ ಸಮಿತಿ ಪೂಜೆಯನ್ನು ದೇವಸ್ಥಾನದ ಪೌಳಿಗೆ ವರ್ಗಾಯಿಸಿದ್ದು, ಇದರಿಂದ ಭಕ್ತರ ಭಾವನೆಗೆ ಧಕ್ಕೆಯಾಗಿದೆ. ಅಲ್ಲದೆ ಭಕ್ತರು ಕೊಳದಲ್ಲಿ ಸ್ನಾನ ಮಾಡಿ ತೀರ್ಥ ಕುಂಡಿಕೆ ಬಳಿ ತೆರಳಿದಾಗ ತೀರ್ಥ ಪ್ರೋಕ್ಷಣೆÉ ಮಾಡುವದು ಕ್ಷೇತ್ರದ ಸಂಪ್ರದಾಯವಾಗಿದೆ. ಆದರೆ, ಸಮಿತಿ ಈ ಕ್ರಮವನ್ನು ಕೂಡ ಸ್ಥಗಿತಗೊಳಿಸುವ ಮೂಲಕ ಕ್ಷೇತ್ರದ ಆಚಾರ, ವಿಚಾರಗಳಿಗೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಭರತ್ ಆರೋಪಿಸಿದರು.

ಬ್ರಹ್ಮಗಿರಿ ಬೆಟ್ಟದಲ್ಲಿರುವ ಸಪ್ತಋಷಿ ಕುಂಡಿಕೆ ದರ್ಶನಕ್ಕೂ ಸಮಿತಿ ಅಡ್ಡಿ ಪಡಿಸುತ್ತಿದೆ. ಇದು ಸಮಿತಿಯ ದ್ವಂದ್ವ ನಿರ್ಧಾರಗಳಿಂದ ಸ್ಥಳೀಯ ಭಕ್ತರು ಮಾತ್ರವಲ್ಲದೆ, ಜಿಲ್ಲೆ, ಹೊರ ಜಿಲ್ಲೆಯ ಭಕ್ತ ಸಮೂಹಕ್ಕೆ ನೋವಾಗಿದೆ. ಶತಮಾನಗಳಿಂದ ನಡೆದುಕೊಂಡು ಬಂದಿರುವ ಮೂಲ ಸಂಪ್ರದಾಯವನ್ನು ಯಥಾಸ್ಥಿತಿಯಾಗಿ ಮುಂದುವರಿಸಿಕೊಂಡು ಹೋಗದಿದ್ದಲ್ಲಿ ಮತ್ತು ಅಗಸ್ತ್ಯ ಲಿಂಗವನ್ನು ಸಮುದ್ರದಲ್ಲಿ ವಿಸರ್ಜಿಸುವ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಭಕ್ತ ಸಮೂಹದ ಬೆಂಬಲದೊಂದಿಗೆ ಹೋರಾಟ ರೂಪಿಸುವದಾಗಿ ಭರತ್ ಎಚ್ಚರಿಕೆ ನೀಡಿದರು.

ಪ್ರಮುಖರಾದ ಕಾಳನ ರವಿ, ಪಿ.ಎಂ.ರಾಜೀವ್ ಹಾಗೂ ಗ್ರಾಮಸ್ಥರು ಮಾತನಾಡಿ, ದೇವಾಲಯ ಸಮಿತಿಯ ಅಧ್ಯಕ್ಷÀ ಬಿ.ಎಸ್.ತಮ್ಮಯ್ಯ ಅವರು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ಆಡಳಿತ ಮಂಡಳಿಯ ಇತರ ಪದಾಧಿಕಾರಿಗಳಿಗೆ ಕೂಡ ಯಾವದೇ ಮಾಹಿತಿ ದೊರೆಯುತ್ತಿಲ್ಲವೆಂದು ಟೀಕಿಸಿದರು. ಹೊಸ ಸಮಿತಿ ರಚನೆಯಾದ ನಂತರ ಅಧ್ಯಕ್ಷರ ವರ್ತನೆ ದೇವಾಲಯದ ಮಂದಿಗೆ ಮತ್ತು ಸುತ್ತಮುತ್ತಲ ಜನರಿಗೆ ಕಿರಿಕಿರಿಯನ್ನು ಉಂಟು ಮಾಡಿದೆ. ಸಮಿತಿ ಯಾವದೇ ನಿರ್ಧಾರ ಕೈಗೊಂಡರೂ ಭಕ್ತ ಸಮೂಹ ಹಾಗೂ ಸಾರ್ವಜನಿಕ ವಲಯದ ಚರ್ಚೆಯ ಮೂಲಕ ಅಂತಿಮ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬಾಲಾಲಯದಲ್ಲಿ ಭಗ್ನಲಿಂಗ

ಕ್ಷೇತ್ರದ ಅಭಿವೃದ್ಧಿ ಸಂದರ್ಭ 12 ವರ್ಷಗಳ ಹಿಂದೆ ಅಗಸ್ತ್ಯ ಲಿಂಗ ಭಗ್ನವಾಗಿದೆ ಎನ್ನುವ ಕಾರಣಕ್ಕಾಗಿ ಲಿಂಗವನ್ನು ಜಲವಾಸದಲ್ಲಿಟ್ಟು ಪೂಜಿಸಲಾಗುತ್ತಿತ್ತು. ಇದೀಗ ಮತ್ತೆ ಈ ಲಿಂಗವನ್ನು ಹೊರತೆಗೆದು ಬಾಲಾಲಯದಲ್ಲಿ ಇರಿಸಲಾಗಿದೆ. ಅಗಸ್ತ್ಯ ಮುನಿಗಳು ಸ್ಥಾಪಿಸಿದ ಲಿಂಗವನ್ನು ಸಮುದ್ರಕ್ಕೆ ವಿಸರ್ಜನೆ ಮಾಡುವದು ಭಕ್ತರ ಭಾವನೆಗೆ ವಿರುದ್ಧವಾದ ಕ್ರಮವಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪಿ.ಪಿ.ವಿನೋದ್, ಮೂಲೆ ಮಜಲು ಪೂಣಚ್ಚ ಹಾಗೂ ಬಿ.ಕೆ.ರಾಜ ರೈ ಉಪಸ್ಥಿತರಿದ್ದರು.