ಗೋಣಿಕೊಪ್ಪಲು, ಡಿ. 21: ಗೋಣಿಕೊಪ್ಪಲು ಕಾವೇರಿ ಕಾಲೇಜು ಹಾಗೂ ವಿವೇಕ ಜಾಗೃತ ಬಳಗ ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಕಾವೇರಿ ಕಾಲೇಜಿನ ಸಭಾಂಗಣದಲ್ಲಿ “ವ್ಯಕ್ತಿತ್ವ ವಿಕಸನಕ್ಕಾಗಿ ಸ್ವಾಮಿ ವಿವೇಕಾನಂದರ ಚಿಂತನೆ” ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಉಡುಪಿ ಡಿವೈನ್ ಪಾರ್ಕ್ ಸಾಲಿಗ್ರಾಮ ಇದರ ಡಿವೈನ್ ಕೇರಿಂಗ್ ಆಫೀಸರ್ ಡಿ.ಎಸ್. ಯಶ್ವಂತ್ ಮಾತನಾಡಿ, ವಿವೇಕಾನಂದರ ತತ್ವ, ಸಿದ್ಧಾಂತ, ಸಂದೇಶಗಳು ಸಾರ್ವಕಾಲಿಕವಾಗಿದ್ದು, ಯುವ ಜನಾಂಗಕ್ಕೆ ಸ್ಪೂರ್ತಿದಾಯಕವಾಗಿವೆ. ವಿವೇಕಾನಂದರ ಚಿಂತನೆಗಳಿಗೆ ಮಾರುಹೋಗಿರುವ ವಿದೇಶೀಯರು ಇಂದು ಭಾರತೀಯ ಸಂಸ್ಕøತಿಯನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳತೊಡಗಿದ್ದಾರೆ. ಇಂದಿನ ಯುವ ಜನಾಂಗ ದೇಶ ಭಕ್ತಿಯನ್ನು ಬೆಳೆಸಿಕೊಳ್ಳಬೇಕಿದೆ. ಎಲ್ಲರಿಗೂ ಸೈನ್ಯಕ್ಕೆ ಸೇರಿಯೇ ದೇಶ ಭಕ್ತಿಯನ್ನು ತೋರಿಸಲು ಅವಕಾಶ ಸಿಗುವದಿಲ್ಲ. ಆದ್ದರಿಂದ ನಾವು ಮಾಡುವ ಯಾವದೇ ಉದ್ಯೋಗದಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡುವ ಮೂಲಕ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಜಗತ್ತಿನಲ್ಲಿ ದೊಡ್ಡ ದೊಡ್ದ ಸಾಧನೆ ಮಾಡಿದವರೆಲ್ಲ ಮೊದಲ ಪ್ರಯತ್ನದಲ್ಲಿ ಸೋತವರೇ, ಅವರು ಮರಳಿ ಪ್ರಯತ್ನ ಮಾಡುವ ಮೂಲಕ ಮಹಾನ್ ವ್ಯಕ್ತಿಗಳು ಎನ್ನಿಸಿಕೊಂಡರು. ಆತ್ಮವಿಶ್ವಾಸ ಹಾಗೂ ಪ್ರಯತ್ನವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದರು.

ಈ ಸಂದರ್ಭ ಪ್ರಾಂಶುಪಾಲ ಪ್ರೊ. ಎಸ್.ಆರ್. ಉಷಾಲತ, ವೀರಾಜಪೇಟೆ ವಿವೇಕ ಜಾಗೃತದಳದ ಉಸ್ತುವಾರಿ ಶಶಿಕಲಾ, ಎನ್‍ಎಸ್‍ಎಸ್ ಅಧಿಕಾರಿಗಳಾದ ಎನ್.ಪಿ. ರೀತ ಹಾಗೂ ಎಂ.ಎನ್. ವನಿತ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.