ಮಡಿಕೇರಿ, ಡಿ. 21: ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಸಹಕಾರ ಚಳುವಳಿ ಮತ್ತು ಸಾಮಾಜಿಕ ಹೊಣೆಗಾರಿಕೆ’ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ‘ಸಹಕಾರ ವ್ಯವಸ್ಥೆ ಕಾಲಕಾಲಕ್ಕೆ ಬದಲಾದ ತಾಂತ್ರಿಕತೆಗೆ ಹಾಗೂ ಸುಧಾರಣೆಗಳಿಗೆ ಸಿದ್ಧವಾಗದಿರುವದೇ ವ್ಯವಸ್ಥೆಯ ವೈಫಲ್ಯಕ್ಕೆ ಕಾರಣಗಳಾಗಿವೆ’ ಎಂಬ ವಿಷಯದ ಬಗ್ಗೆ ಚರ್ಚಾ ಸ್ಪರ್ಧೆಯನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳು ಪ್ರಬಂಧವನ್ನು ಮಂಡಿಸಿದರು. ನಂತರದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ವಿಷಯದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ನಂತರ ಏರ್ಪಡಿಸಲಾದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಮಾತನಾಡಿ, ಸಹಕಾರ ಕ್ಷೇತ್ರವು ಅಗಾದವಾಗಿ ಬೆಳೆಯುತ್ತಿದ್ದು, ಇಂದು ಪ್ರತಿ ಹಳ್ಳಿ-ಹಳ್ಳಿಗೂ ಇದರ ಸೇವೆಯನ್ನು ತಲಪಿಸಲಾಗಿದೆ. ಇದು ಸಹಕಾರ ಕ್ಷೇತ್ರಕ್ಕೆ ಸಲ್ಲುವ ಹೆಮ್ಮೆಯಾಗಿದೆ. ಆ ಸಲುವಾಗಿ ಪ್ರಾಥಮಿಕ ಹಂತದಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಂತಹ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸಹಕಾರ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲ ಗುರುಮಲ್ಲಪ್ಪ ಚರ್ಚಾ ಸ್ಪರ್ಧೆಯಲ್ಲಿ ವಿಷಯ ಮಂಡಿಸುವ ವಿಧಾನದ ಕುರಿತು ಮಾಹಿತಿ ನೀಡಿದರು. ತೀರ್ಪುಗಾರರಾಗಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕ ಬಿ.ಜಿ. ವೆಂಕಟರಮಣ ರೆಡ್ಡಿ, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್‍ನ ಪ್ರಾಂಶುಪಾಲ ಪುಟ್ಟಸ್ವಾಮಿ ಭಾಗವಹಿಸಿದರು.

ವೇದಿಕೆಯಲ್ಲಿ ಕೊಡಗುಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಕನ್ನಂಡ ಸಂಪತ್, ಕೆ.ಎಂ. ತಮ್ಮಯ್ಯ, ಎನ್.ಎ. ರವಿ ಬಸಪ್ಪ, ಪ್ರೇಮ ಸೋಮಯ್ಯ ಹಾಗೂ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಬಾಲಕೃಷ್ಣ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.

ವಿಜೇತರು: ಪ್ರಬಂಧ ಸ್ಪರ್ಧೆ

ಪ್ರಥಮ - ಪ್ರಗತಿ ಕೆ.ಎಸ್. ಶಾಂತಿನಿಕೇತನ ಪ್ರೌಢಶಾಲೆ, ಕೊಡಗರಹಳ್ಳಿ ಅಂಚೆ, ದ್ವಿತೀಯ - ಅನುಘ್ನ ಬಿ. ಕೆ.ಎಂ.ಟಿ., ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗಂಧದ ಕೋಟೆ, ತೃತೀಯ - ಪ್ರವೀಣ್ ಕೆ.ಆರ್. ಜ್ಞಾನವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸೋಮವಾರಪೇಟೆ. ಸಮಾಧಾನಕರ ಬಹುಮಾನ - ದೀಕ್ಷಿತ ಸಿಬಿ., ತ್ರಿವೇಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ವೀರಾಜಪೇಟೆ.

ಚರ್ಚಾ ಸ್ಪರ್ಧೆ: ಪ್ರಥಮ - ಸವಿತಾ ಕೆ.ಎಸ್. ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜು, ದ್ವಿತೀಯ - ರಾಜಿಕ್ ಎ.ಎ., ಸರ್ವದೈವತಾ ಪದವಿಪೂರ್ವ ಕಾಲೇಜು, ಅರುವತ್ತೋಕ್ಲು, ತೃತೀಯ - ಚಂದನ ಎಂ.ಆರ್. ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜು. ಸಮಾಧಾನಕರ ಬಹುಮಾನ ತಸ್ಲೀಮ್ ಕೌಸರ್, ಎಸ್.ಎಸ್. ಪದವಿಪೂರ್ವ ಕಾಲೇಜು, ಕೊಡ್ಲಿಪೇಟೆ.