ಮಡಿಕೇರಿ, ಡಿ. 21: ಕಾರ್ಮಿಕ ಇಲಾಖೆಯಲ್ಲಿ ಬಾಲ ಕಾರ್ಮಿಕ ಕಾಯ್ದೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಹೆಚ್. ರಾಮಕೃಷ್ಣ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 14 ವರ್ಷದೊಳಗಿನ ಮಕ್ಕಳು ಯಾವದೇ ಸಂಸ್ಥೆ ಹಾಗೂ ಸ್ಥಳಗಳಲ್ಲಿ ಕೆಲಸ ನಿರ್ವಹಿಸುವದು ನಿಷಿದ್ಧ. ಈ ಬಗ್ಗೆ ಎಲ್ಲಾದರು ಬಾಲ ಕಾರ್ಮಿಕರು ಕಂಡುಬಂದಲ್ಲಿ ತಾಲೂಕು ಮಟ್ಟದಲ್ಲಿನ ಹಿರಿಯ ಕಾರ್ಮಿಕ ನಿರೀಕ್ಷಕರು ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಮಿಕ ಅಧಿಕಾರಿ ಮತ್ತು ಯೋಜನಾ ನಿರ್ದೇಶಕರು ಅಥವಾ ಚೈಲ್ಡ್ ಹೆಲ್ಪ್‍ಲೈನ್-1098 ಕ್ಕೆ ತಿಳಿಸಬಹುದಾಗಿದೆ ಎಂದರು.

ಅದೇ ರೀತಿ ಜಿಲ್ಲೆಯ ಎಲ್ಲಾ ವಲಯಗಳ ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಹೊರಗುತ್ತಿಗೆ ನೌಕರರನ್ನು ಸೇರಿದಂತೆ, ಉದ್ದಿಮೆಗಳಿಗೆ ಕನಿಷ್ಟ ವೇತನ ನಿಗದಿಯಾಗಿದ್ದು, ನಿಗದಿತ ಕನಿಷ್ಟ ವೇತನ ನೀಡದಿರುವ ಪ್ರಕರಣಗಳು ಕಂಡುಬಂದಲ್ಲಿ ಆಯಾ ತಾಲೂಕು ಮಟ್ಟದ ಹಿರಿಯ ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸದಲ್ಲಿ ನಿರತರಾಗಿರುವ ಕಟ್ಟಡ ಕಾರ್ಮಿಕ ಮಂಡಳಿಯ ವತಿಯಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಅವುಗಳಲ್ಲಿ ಶೈಕ್ಷಣಿಕ ಧನ ಸಹಾಯ, ವೈದ್ಯಕೀಯ ಧನ ಸಹಾಯ, ಮದುವೆ ಧನ ಸಹಾಯ, ಹೆರಿಗೆ ಸೌಲಭ್ಯ, ವೈದ್ಯಕೀಯ ಮತ್ತು ಅಪಘಾತ ಪರಿಹಾರ ಇವುಗಳಿಗೆ ಸಹಾಯಧನ ನೀಡಲಾಗುತ್ತಿದೆ. ಈ ವರ್ಗದಲ್ಲಿ ದುಡಿಯುವ ಕಾರ್ಮಿಕರು ಆಯಾ ತಾಲೂಕಿನ ಹಿರಿಯ ಕಾರ್ಮಿಕ ನಿರೀಕ್ಷಕರವರನ್ನು ಸಂಪರ್ಕಿಸಿ, ತಕ್ಷಣ ನೋಂದಣಿ ಮಾಡಿಕೊಳ್ಳಲು ಕೋರಿದೆ.

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಹಮಾಲರು, ಚಿಂದಿ ಆಯುವವರು, ಟೈಲರ್‍ಗಳು, ಮನೆ ಕೆಲಸದವರು, ಕ್ಷೌರಿಕರು, ಮರಗೆಲಸ ಮಾಡುವವರು, ದೋಬಿ, ಕುಂಬಾರಿಕೆ, ಅಕ್ಕಸಾಲಿಗರು ಮತ್ತು ಮೆಕ್ಯಾನಿಕ್ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ. ಈ ವಲಯದಲ್ಲಿ ದುಡಿಯುವ ಕಾರ್ಮಿಕರು ಕಾರ್ಮಿಕ ಅಧಿಕಾರಿ ಕಚೇರಿ, ಮಡಿಕೇರಿ ಇವರನ್ನು ಸಂಪರ್ಕಿಸಿ, ನಿಗದಿತ ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲೆ ಮತ್ತು ಫೋಟೋ ನೀಡಿ, ಅರ್ಜಿಯನ್ನು ಸ್ಮಾರ್ಟ್ ಕಾರ್ಡ್ ನೋಂದಣಿಗಾಗಿ ಸಲ್ಲಿಸಲು ಈ ಮೂಲಕ ಕೋರಿದೆ.

ಹೆಚ್ಚಿನ ಮಾಹಿತಿಗೆ ಎಂ.ಹೆಚ್. ರಾಮಕೃಷ್ಣ, ಕಾರ್ಮಿಕ ಅಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ. ದೂ:(08272) 225534, 224534. ಎಂ.ಎಂ. ಯತ್ನಟ್ಟಿ, ಹಿರಿಯ ಕಾರ್ಮಿಕ ನಿರೀಕ್ಷಕರು, ಮಡಿಕೇರಿ ವೃತ್ತ, ಮಡಿಕೇರಿ. ಮೊ. 9448642111. ಮಹದೇವಸ್ವಾಮಿ ಎಂ, ಹಿರಿಯ ಕಾರ್ಮಿಕ ನಿರೀಕ್ಷಕರು, ಸೋಮವಾರಪೇಟೆ ವೃತ್ತ ಮತ್ತು ವೀರಾಜಪೇಟೆ ವೃತ್ತ. ಮೊ. 9448229743. ಆರ್ ಶೀರಾಝ್ ಅಹ್ಮದ್, ಯೋಜನಾ ನಿರ್ದೇಶಕರು, ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಮಡಿಕೇರಿ. ಮೊ. 9844361981, ದೂ:08272 220224 ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಕಾರ್ಮಿಕ ಅಧಿಕಾರಿ ರಾಮಕೃಷ್ಣ ತಿಳಿಸಿದ್ದಾರೆ.