ಚೆಟ್ಟಳ್ಳಿ, ಡಿ. 21: ವಾಲ್ನೂರು ಗ್ರಾ.ಪಂ. ವ್ಯಾಪ್ತಿಯ ಬಾಳೆಗುಂಡಿ ಹಾಡಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಹಾಡಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.
ಬಾಳೆಗುಂಡಿ ಹಾಡಿಯ ನಿವಾಸಿಗಳು ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರು.
ಹಾಡಿ ಜನರ ಸಮಸ್ಯೆಗಳನ್ನು ಆಲಿಸಿದ ವಾಲ್ನೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅನಿಲ್‍ಕುಮಾರ್, ಈ ಜಾಗದ ವಿಚಾರವಾಗಿ ಕೋರ್ಟಿನಲ್ಲಿ ಪ್ರಕರಣ ನಡೆಯುತ್ತಿರುವ ಕಾರಣ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ರಸ್ತೆ ನಿರ್ಮಾಣದ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ಆದೇಶ ಬರುವವರೆಗೂ ಯಾವದೇ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗುವದಿಲ್ಲ. ಹಾಡಿ ಜನರ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಬಳಿ ಚರ್ಚೆ ನಡೆಸಿ ಪರಿಹಾರ ಒದಗಿಸಿಕೊಡಲು ಶ್ರಮಿಸಲಾಗುವದು ಎಂದರು.
ಕರ್ನಾಟಕ ಆದಿವಾಸಿಗಳ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಜೆ.ಕೆ. ಪ್ರಕಾಶ್, ಅಬ್ಬೂರುಕಟ್ಟೆ ಹಾಡಿಯ ರಮೇಶ್, ಬೀರಪ್ಪ, ಉಲಗುಂದ ಹಾಡಿಯ ಶಿವಣ್ಣ, ಬಾಳೆಗುಂಡಿ ಹಾಡಿ ಮಾಜಿ ಅಧ್ಯಕ್ಷ ರಂಗ, ಸ್ಥಳೀಯರಾದ ಸರಸ್ವತಿ ಅಪ್ಪಣಿ ಇದ್ದರು.