ಕೂಡಿಗೆ, ಡಿ. 21: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೂಡಿಗೆಯ ಕಾರ್ಪೊರೇಷನ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ಆರು ದಿನಗಳ ಮಹಿಳಾ ತರಬೇತಿ ಕಾರ್ಯಾಗಾರವು ಸ್ವ ಉದ್ಯೋಗ ತರಬೇತಿ ಕೇಂದ್ರದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಭಿವೃದ್ಧಿ ನಿರೀಕ್ಷಕಿ ಮುಮ್ತಾಜ್ ನೆರವೇರಿಸಿದರು. ನಂತರ ಮಾತನಾಡಿದ ಅವರು, ಮಹಿಳೆಯರು, ತರಬೇತಿ ಪಡೆಯುವದರಿಂದ ಸ್ವ ಉದ್ಯೋಗ ನಡೆಸಲು ಬೇಕಾಗುವಂತಹ ಸಾಲ ಸೌಲಭ್ಯಗಳಿಗೆ ತರಬೇತಿ ಮುಖ್ಯವಾಗಿರುತ್ತದೆ. ಇದರಿಂದ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಸುರೇಶ್ ಮಾತನಾಡಿ, ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ನಿಮ್ಮ ಇಚ್ಚೆಗನುಸಾರವಾದ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಮತ್ತು ಲಾಭದಾಯಕವಾಗಿ ಸ್ವ ಉದ್ಯೋಗವನ್ನು ನಡೆಸಲು ವಿವಿಧ ಹಂತದಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಸಂಸ್ಥೆಯು ಉದ್ಯಮ ಶೀಲತಾ ಅಭಿವೃದ್ಧಿ ತರಬೇತಿಗಳನ್ನು ನಡೆಸಲು ಬೇಕಾದ ಎಲ್ಲಾ ಮೂಲ ಭೂತ ಸೌಲಭ್ಯಗಳನ್ನು ಹೊಂದಿದೆ. ಇದನ್ನು ಸದ್ಬಳಸಿಕೊಳ್ಳುವಂತೆ ಮನವಿ ಮಾಡಿದರು.

ತರಬೇತಿ ಕಾರ್ಯಾಗಾರದಲ್ಲಿ ಉದ್ಯೋಗಿನಿ, ಚೇತನ, ಧನುಶ್ರೀ ಹಾಗೂ ಅಲ್ಪಸಂಖ್ಯಾತರ ಲಿಂಗತ್ವ ಈ ಯೋಜನೆಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯೋಜಕ ಪ್ರಿಯಾ, ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಸಲಾಹುದ್ದೀನ್, ಹರೀಶ್ ಸೇರಿದಂತೆ ಜಿಲ್ಲೆಯ 44 ತರಬೇತಿದಾರರು ಭಾಗವಹಿಸಿದ್ದರು.