ಮಡಿಕೇರಿ, ಡಿ. 21: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ನಾಲ್ನಾಡ್ ಕುಡಿಯ ಮಂದ್ ನಮ್ಮೆ ಸಮಿತಿಯ ಸಂಯುಕ್ತ ಆಶ್ರಯದಲ್ಲಿ 5ನೇ ವರ್ಷದ ಕುಡಿಯಡ ಮಂದ್ ನಮ್ಮೆ ತಾ. 26 ರಂದು ಯವಕಪಾಡಿಯ ಕುಡಿಯಡ ಮಂದ್‍ನಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸ್ಥಾಪಕಾಧ್ಯಕ್ಷ ಕುಡಿಯರ ಮುತ್ತಪ್ಪ, ಕುಡಿಯ ಜನಾಂಗದ ಆಚಾರ, ವಿಚಾರ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಒಂದು ದಿನದ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ತಾ. 26 ರಂದು ಬೆಳಿಗ್ಗೆ 10 ಗಂಟೆಗೆ ಯವಕಪಾಡಿ ಗ್ರಾಮದ ಹಿರಿಯರಾದ ಕೋಲಿಂದಮಲೆ ಕೆ. ಪೊನ್ನಪ್ಪ ನಮ್ಮೆಯನ್ನು ಉದ್ಘಾಟಿಸಲಿದ್ದಾರೆ.ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಕಕ್ಕಬೆ ವಿಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷ ಕಲಿಯಾಟಂಡ ರಘ ತಮ್ಮಯ್ಯ, ಭಾಗಮಂಡಲ ಲ್ಯಾಂಪ್ಸ್ ಸಹಕಾರ ಸಂಘದ ಉಪಾಧ್ಯಕ್ಷ ನಾಡುಮಲೆ ಕಾವೇರಮ್ಮ ಅಪ್ಪಣ್ಣ, ಕಕ್ಕಬೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸಿ.ಬಿ. ಪೊನ್ನವ್ವ ಮತ್ತಿತರ ಪ್ರಮುಖರು ಉಪಸ್ಥಿತರಿರುವರು.
ಸಾಂಸ್ಕøತಿಕ ಕಾರ್ಯಕ್ರಮ-ಕೋಲಾಟ್, ಬೊಳಕಾಟ್, ಉಮ್ಮತ್ತಾಟ್, ಉರ್‍ಟಿಕೊಟ್ಟ್ ಆಟ್, ಕತ್ತಿಯಾಟ್, ಪರಿಯಕಳಿ, ಕಪ್ಪೆ ಆಟ್, ಕಥೆ-ಕವನ, ಒಂಟಿ ನಟನೆ ಮೊದಲಾದ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಮುಕ್ತ ಅವಕಾಶವಿದೆಯೆಂದು ಮುತ್ತಪ್ಪ ತಿಳಿಸಿದರು.
ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಜಿ. ಬೋಪಯ್ಯ, ಕುಡಿಯ ಮಂದ್ ಸಮಿತಿ ಅಧ್ಯಕ್ಷ ಕೋಲಿಂದಮಲೆ ಎ. ಬೋಪಯ್ಯ, ಜಿ.ಪಂ. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಕುಂಜಿಲ ಕಕ್ಕಬೆ ಗ್ರಾ.ಪಂ. ಅಧ್ಯಕ್ಷೆ ಶೈಲ ಕುಟ್ಟಪ್ಪ, ಅಕಾಡೆಮಿ ಮಾಜಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ, ಕ್ರೀಡಾ ಮತ್ತು ಸಾಂಸ್ಕøತಿಕ ಸಮಿತಿ ಸಂಚಾಲಕ ಪಡಿಞರಂಡ ಪ್ರಭು, ಐರಿ ಸಮಾಜದ ಅಧ್ಯಕ್ಷ ಮೇಲತಂಡ ರಮೇಶ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಉಪಸ್ಥಿತರಿರುವರು.
ಕೊಡವ ಸಾಹಿತ್ಯ ಅಕಾಡೆಮಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಎಸ್‍ಸಿ ಮತ್ತು ಎಸ್‍ಟಿ ಜನಾಂಗದ ಆಚಾರ, ವಿಚಾರಗಳ ಬೆಳವಣಿಗೆಗೆ ಶೇ. 25 ರಷ್ಟನ್ನು ಮೀಸಲಿಡಬೇಕೆಂದು ಅಕಾಡೆಮಿ ಅಧ್ಯಕ್ಷರಲ್ಲಿ ಮನವಿ ಮಾಡಿದ್ದು, ಈ ಬೇಡಿಕೆ ಈಡೇರುತ್ತದೆ ಎನ್ನುವ ವಿಶ್ವಾಸ ತಮಗಿದೆ ಎಂದು ಮುತ್ತಪ್ಪ ತಿಳಿಸಿದರು.
ಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯ ಟಿ.ಎಂ. ಮುದ್ದಯ್ಯ, ಕುಡಿಯ ಮಂದ್ ನಮ್ಮೆ ಸಮಿತಿಯ ಅಧ್ಯಕ್ಷ ಕೋಲಿಂದಮಲೆ ಎ. ಬೋಪಯ್ಯ, ಸದಸ್ಯರಾದ ಕೆ.ಎ. ನಾಣಯ್ಯ ಹಾಗೂ ಅರುಣ್ ಕಾರ್ಯಪ್ಪ ಉಪಸ್ಥಿತರಿದ್ದರು.