ಮಡಿಕೇರಿ, ಡಿ. 21: ಕೃಷಿ ಉತ್ಪನ್ನ ಮಾರುಕುಟ್ಟೆ ಸಮಿತಿ ವತಿಯಿಂದ ಎಪಿಎಂಸಿ ಆವರಣದಲ್ಲಿ ರೈತರ ಸಂಸ್ಥೆ ಮತ್ತೆ ಆರಂಭಗೊಂಡಿದೆ. ಕಳೆದ ವರ್ಷ ಆರಂಭಗೊಂಡ ಸಂತೆ ಮಳೆಗಾಲದ ನಂತರ ಸ್ಥಗಿತಗೊಂಡಿತ್ತು. ಇದೀಗ ಇಂದಿನಿಂದ ಸಂತೆ ಪುನರಾರಂಭಗೊಂಡಿದ್ದು, ಮತ್ತೆ ನಾಡು ತರಕಾರಿಗಳ ಸ್ವಾದ ಹರಡಿದೆ.
ಎಪಿಎಂಸಿ ಪ್ರಾಂಗಣದಲ್ಲಿ ರೈತ ಸಂತೆಗಾಗಿ ರೂ. 75 ಲಕ್ಷ ವೆಚ್ಚದಲ್ಲಿ ಮಾರುಕಟ್ಟೆ ಹಾಗೂ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದ್ದು, ಇಂದು ಹೊಸ ಕಟ್ಟಡ ಸೇರಿದಂತೆ ಹಳೆ ಕಟ್ಟಡದಲ್ಲಿ ಗ್ರಾಮೀಣ ಭಾಗದ ರೈತರು ತಾವು ಬೆಳೆದಿದ್ದ ತರಕಾರಿ, ಇನ್ನಿತರ ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದರು. ವಿಶಾಲವಾದ ಪ್ರಾಂಗಣದಲ್ಲಿ ಯಾವದೇ ಸುಂಕವಿಲ್ಲದೆ ಇಲ್ಲಿ ವ್ಯಾಪಾರ ಮಾಡಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ವಾಹನ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶವಿರುವದರಿಂದ ಗ್ರಾಹಕರು, ಅದರಲ್ಲೂ ನಾಡು ತರಕಾರಿ ರುಚಿ ಬಲ್ಲವರು ಯಾವದೇ ಜನಸಂದಣಿ ಇಲ್ಲದೆ, ಸಾವಕಾಶವಾಗಿ ಬಂದು ತಮಗೆ ಬೇಕಾದ ಪದಾರ್ಥಗಳನ್ನು ಖರೀದಿಸುತ್ತಿದ್ದುದು ಕಂಡು ಬಂದಿತು.
ರೈತರ ಸಂತೆಯಲ್ಲಿ ನಾಡು ಸೌತೆ, ಬೆಳ್ಳಾರೆಕಾಯಿ, ಬಸಲೆ ಸೊಪ್ಪು, ನಾಡು ಬೀನ್ಸ್, ನೂಕೋಲು ಸೇರಿದಂತೆ ಬಾಳೆ ದಿಂಡು, ಕೂಂಬೆ, ಕಹಿಹುಳಿ, ಕಿತ್ತಳೆ ಸೇರಿದಂತೆ ಇತರ ತರಕಾರಿಗಳು ದಿನಸಿ ಸಾಮಗ್ರಿಗಳು ಕೂಡ ಇದ್ದವು.
ಕಳೆದ ಸಾಲಿನಲ್ಲಿ ಕಾಂಗೀರ ಸತೀಶ್ ಅವರು ಅಧ್ಯಕ್ಷರಾಗಿದ್ದ ಸಂದರ್ಭ
(ಮೊದಲ ಪುಟದಿಂದ) ಆರಂಭಗೊಂಡ ಸಂತೆ ಇದೀಗ ಅಧ್ಯಕ್ಷರಾಗಿರುವ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಮತ್ತೆ ಆರಂಭಗೊಂಡಿದೆ. ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ದಲ್ಲಾಳಿಗಳ ಹಾವಳಿಯಿಂದ ಹೊರತುಪಡಿಸಿ ರೈತರು ತಾವು ಬೆಳೆದ ಪದಾರ್ಥಗಳನ್ನು ನೇರವಾಗಿ ಮಾರಾಟ ಮಾಡಿ ಆರ್ಥಿಕ ಸ್ವಾವಲಂಬನೆ ಹೊಂದುವ ಉದ್ದೇಶದೊಂದಿಗೆ ಆರಂಭಗೊಂಡಿರುವ ರೈತ ಸಂತೆಗೆ ಗ್ರಾಹಕರ ಒಲವು ಹೆಚ್ಚಾದಲ್ಲಿ ಯಾವದೇ ಜಂಜಾಟವಿಲ್ಲದೆ ತಮಗೆ ಬೇಕಾದ ಪದಾರ್ಥಗಳನ್ನು ಕೊಂಡೊಯ್ಯಬಹುದಾಗಿದೆ. - ಸಂತೋಷ್