ವೀರಾಜಪೇಟೆ, ಡಿ. 21: ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ಸೇವಾ ಸಮಿತಿಯಿಂದ ತಾ. 30 ರಿಂದ ಜ. 1 ರ ತನಕ ವರ್ಷಂ ಪ್ರತಿಯಂತೆ ಅಯ್ಯಪ್ಪ ಉತ್ಸವ ಆಚರಿಸಲು ಸಮಿತಿಯು ಪೂರ್ವ ಸಿದ್ಧತೆ ನಡೆಸುತ್ತಿರುವದಾಗಿ ಟ್ರಸ್ಟ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಶ್ಯಾಮ್‍ಕುಮಾರ್ ತಿಳಿಸಿದ್ದಾರೆ

ಅಯ್ಯಪ್ಪ ಸೇವಾ ಸಮಿತಿಯಿಂದ ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ಯಾಮ್ ಕುಮಾರ್ ಅವರು ತಾ. 30ರ ರಾತ್ರಿ ವಿಶೇಷ ಪೂಜೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುವದು. ತಾ:31ರಂದು ಬೆಳಗಿನಿಂದಲೇ ಸಾಂಪ್ರದಾಯಿಕ ಪೂಜೆ ವಿಧಿ ವಿಧಾನಗಳು ಜೊತೆಗೆ ವಿವಿಧ ಕಾರ್ಯಕ್ರಮಗಳು ರಾತ್ರಿಯವರೆಗೆ ಜರುಗಲಿವೆ. ಜನವರಿ 1 ರಂದು ಬೆಳಗಿನ 5.30 ಗಂಟೆಗೆ ಗಣಪತಿ ಹೋಮ 9 ಗಂಟೆಗೆ ತುಲಾಭಾರ 10ಗಂಟೆಯಿಂದ ವೃತಧಾರಿ ಸ್ವಾಮಿಗಳಿಂದ ಲಕ್ಷಾರ್ಚನೆ, ಅಪರಾಹ್ನ 12.45 ಗಂಟೆಗೆ ಮಹಾಪೂಜಾ ಸೇವೆ, ಅಪರಾಹ್ನ 1 ಗಂಟೆಯಿಂದ 3.30 ರ ತನಕ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅಯ್ಯಪ್ಪ ಸೇವಾ ಸಮಿತಿಯ ಜಂಟಿ ಕಾರ್ಯದರ್ಶಿ ಡಿ.ಎಂ. ರಾಜ್‍ಕುಮಾರ್ ಮಾತನಾಡಿ, ರಾತ್ರಿ 7ಗಂಟೆಗೆ ಅದ್ಧೂರಿಯ ಮೆರವಣಿಗೆ ಆರಂಭಿಸಲಾಗುವದು. ಮೆರವಣಿಗೆಯಲ್ಲಿ ದೀಪಾರತಿ, ಅಯ್ಯಪ್ಪನ ಚಲನ ವಲನಗಳಿರುವ ವಿಗ್ರಹ, ಕೇರಳದ ಚಂಡೆ ಮದ್ದಳೆ, ವಿವಿಧ ಮನರಂಜನಾ ತಂಡಗಳು ಭಾಗವಹಿಸಲಿವೆ. ಮೆರವಣಿಗೆಯಲ್ಲಿ ಭಾಗವಹಿಸಬೇಕಾದ ಆನೆ ಅಂಬಾರಿಗೆ ಆನೆಯನ್ನು ಕೇರಳದಿಂದ ಕೊಡಗಿಗೆ ತರಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆನೆ ಅಂಬಾರಿ ಈ ಬಾರಿಯ ಮೆರವಣಿಗೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಮೆರವಣಿಗೆಯು ಸಿದ್ದಾಪುರ ರಸ್ತೆಯಲ್ಲಿರುವ ಮಲೆತಿರಿಕೆ ಬೆಟ್ಟದಿಂದ ಪ್ರಾರಂಭಿಸಿ ತೆಲುಗರ ಬೀದಿ, ಜೈನರಬೀದಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಮುಖ್ಯ ರಸ್ತೆಯ ಮಾರ್ಗವಾಗಿ ಮಲಬಾರ್ ರಸ್ತೆಯ ಮುತ್ತಪ್ಪ ದೇವಾಲಯವನ್ನು ತಲಪಿ ಅಲ್ಲಿ ಪೂಜೆ ಸಲ್ಲಿಸಿದ ನಂತರ ಹಿಂದಿರುಗಿ ಬಂದು ಅಯ್ಯಪ್ಪ ದೇವಾಲಯದಲ್ಲಿ ರಾತ್ರಿ 12.30 ಗಂಟೆಗೆ ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿ ಉತ್ಸವಕ್ಕೆ ತೆರೆ ಎಳೆಯಲಾಗುವದು ಎಂದು ಹೇಳಿದರು.

ಗೋಷ್ಠಿಯಲ್ಲಿ ಸೇವಾ ಸಮಿತಿಯ ಪಿ.ಕೆ. ಪ್ರದ್ಯುಮ್ನ, ಮುಕ್ಕಾಟಿರ ಪೊನ್ನಪ್ಪ, ಎ.ಆರ್. ಯೋಗಾನಂದ ರಾವ್, ಬಿ.ಕೆ. ಚಂದ್ರು, ಎ.ಎನ್. ದಶರಥ ಮತ್ತಿತರರು ಉಪಸ್ಥಿತರಿದ್ದರು.