ಕುಶಾಲನಗರ, ಡಿ. 21: ಕುಶಾಲನಗರದಲ್ಲಿ ಸೇವೆ ಸಲ್ಲಿಸುತ್ತಿದ್ದ ಖಾಸಗಿ ವೈದ್ಯರ ಬರ್ಬರ ಹತ್ಯೆ ಘಟನೆ ಬೆನ್ನಲ್ಲೇ ಸ್ಥಳೀಯ ವೈದ್ಯರು ರಾತ್ರಿ ವೇಳೆ ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂಜರಿಯುತ್ತಿರುವ ಬಗ್ಗೆ ವರದಿಯಾಗಿದೆ. ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ 15 ಕ್ಕೂ ಅಧಿಕ ಖಾಸಗಿ ವೈದ್ಯರು ತಮ್ಮ ಕ್ಲಿನಿಕ್ ವೇಳೆಯ ನಂತರ ಮನೆಯಲ್ಲಿ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದರು. ಡಾ. ದಿಲೀಪ್ ಅವರ ನಿವಾಸಕ್ಕೆ ನುಗ್ಗಿ ಹತ್ಯೆ ನಡೆಸಿದ ನಂತರ ಬಹುತೇಕ ವೈದ್ಯರಿಗೆ ಅಭದ್ರತೆ ಕಾಡುತ್ತಿರುವದಾಗಿ ತಿಳಿದು ಬಂದಿದೆ.

10 ದಿನಗಳು ಕಳೆದರೂ ಡಾ.ದಿಲೀಪ್ ಅವರ ನಿಗೂಢ ಹತ್ಯೆಗೆ ಕಾರಣರಾದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದು, ಆರೋಪಿಗಳು ರಾಜಾರೋಷವಾಗಿ ತಿರುಗಾಡುವ ಸಾಧ್ಯತೆಯಿದ್ದು ಈ ಹಿನ್ನೆಲೆಯಲ್ಲಿ ದಿನದ 24 ಗಂಟೆಗಳ ಕಾಲ ಸೇವೆ ಸಲ್ಲಿಸಲು ಮುಂದಾಗಿದ್ದ ವೈದ್ಯರಿಗೆ ಅಭದ್ರತೆ ಉಂಟಾಗಿದೆ ಎಂದು ಕುಶಾಲನಗರದ ಹಿರಿಯ ವೈದ್ಯರಾದ ಡಾ. ಹರಿ ಎ. ಶೆಟ್ಟಿ ತಿಳಿಸಿದ್ದಾರೆ.

ಇದರಿಂದ ಸುತ್ತಮುತ್ತಲ ರೋಗಿಗಳಿಗೆ ಕೂಡ ಭಾರೀ ತೊಂದರೆ ಕಂಡುಬಂದಿದ್ದು ಡಾ.ದಿಲೀಪ್ ಹತ್ಯೆ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲಾ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಪತ್ತೆ ಮಾಡಬೇಕಾಗಿದೆ ಎಂದು ನಾಗರಿಕರು ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.

ಇನ್ನೊಂದೆಡೆ ಡಾ. ದಿಲೀಪ್ ಹತ್ಯೆ ಪ್ರಕರಣ ನಡೆದ ನಂತರದ ದಿನಗಳಲ್ಲಿ ಗಾಳಿ ಸುದ್ದಿಯೊಂದು ಎಲ್ಲೆಡೆ ಹಬ್ಬಿದ್ದು ಡಾ. ದಿಲೀಪ್ ಸತ್ತಿಲ್ಲ. ಜೀವಂತವಾಗಿದ್ದಾರೆ. ಅವರನ್ನು ಮೈಸೂರು ಆಸ್ಪತ್ರೆಯಿಂದ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಕುಶಾಲನಗರ, ಕೊಪ್ಪ, ಬೈಲುಕೊಪ್ಪ ಸೇರಿದಂತೆ ಸುತ್ತಮುತ್ತ ಇದೇ ಗುಸುಗುಸು ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿದ್ದು ಹತ್ಯೆ ನಡೆಸಿದ ಹಂತಕರು ಇಂತಹದೊಂದು ಮಾಹಿತಿಯನ್ನು ಹರಿಯಬಿಟ್ಟಿದ್ದು ತನಿಖೆಗೆ ಅಡ್ಡಿಯಾಗುವಂತೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಖಚಿತ ಮಾಹಿತಿ ಪ್ರಕಾರ ಡಾ. ದಿಲೀಪ್ ಅವರ ಮರಣೋತ್ತರ ಪರೀಕ್ಷೆ ಮೈಸೂರು ಕೆಆರ್ ಆಸ್ಪತ್ರೆಯಲ್ಲಿ ನಡೆದಿದ್ದು ನಂತರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಮೃತದೇಹದ ಅಂತ್ಯಕ್ರಿಯೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅವರ ಸ್ವಗ್ರಾಮದಲ್ಲಿ ನಡೆದಿದೆ ಎಂದು ಡಾ. ದಿಲೀಪ್ ಅವರ ಹಿರಿಯ ಸಹೋದರ ಪೂರ್ಣೇಶ್ ಖಚಿತಪಡಿಸಿದ್ದಾರೆ.

ಹತ್ಯೆ ಪ್ರಕರಣ ಬೇಧಿಸಲು ಕೊಡಗು ಜಿಲ್ಲಾ ಪೊಲೀಸ್ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಪಿ.ಸುಮನ ಅವರು ಶಕ್ತಿಗೆ ತಿಳಿಸಿದ್ದಾರೆ. ಅವರು ಕುಶಾಲನಗರದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ, ಕುಶಾಲನಗರದ ಪೊಲೀಸ್ ಅಧಿಕಾರಿಗಳ ಮೂಲಕ ಮಾಹಿತಿ ಸಂಗ್ರಹಿಸಲಾಗಿದ್ದು ಪ್ರಕರಣದ ತನಿಖಾಧಿಕಾರಿ ಪಿರಿಯಾಪಟ್ಟಣದ ವೃತ್ತ ನಿರೀಕ್ಷಕ ಪ್ರದೀಪ್ ಅವರಿಗೆ ಸಂಪೂರ್ಣ ವಿವರ ಒದಗಿಸಲಾಗಿದೆ. ಈ ಮೂಲಕ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವದರೊಂದಿಗೆ ಆದಷ್ಟು ಬೇಗ ಹಂತಕರ ಪತ್ತೆ ಮಾಡಲು ಇಲಾಖೆ ಕ್ರಮಕೈಗೊಳ್ಳುತ್ತಿದೆ ಎಂದಿದ್ದಾರೆ. ಘಟನೆ ಹಿನೆÉÀ್ನಲೆಯಲ್ಲಿ ಖಾಸಗಿ ವೈದ್ಯರು ಭದ್ರತೆ ಸಂಬಂಧ ಯಾವದೇ ರೀತಿಯ ಆತಂಕ ಪಡಬೇಕಾಗಿಲ್ಲ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. - ಚಂದ್ರಮೋಹನ್