ಮಡಿಕೇರಿ, ಡಿ. 21: ಜನತೆಯ ಆರೋಗ್ಯ ರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಇತ್ತ ದಿವ್ಯನಿರ್ಲಕ್ಷ್ಯದೊಂದಿಗೆ, ಇಲ್ಲದ ಸಿಬ್ಬಂದಿ ಹಾಗೂ ವೈದ್ಯರ ಲೆಕ್ಕದಲ್ಲಿ ಮಾಸಿಕ ವೇತನದ ಲೆಕ್ಕ ತೋರುವದರೊಂದಿಗೆ, ಸರಕಾರ ಮತ್ತು ಜನರ ಕಣ್ಣಿಗೆ ವಂಚಿಸುತ್ತಿರುವ ಸಂಗತಿ ಬಹಿರಂಗಗೊಂಡಿದೆ.ಗ್ರಾಮೀಣ ಭಾಗದ ಜನತೆಯ ಪ್ರಕಾರ ಗಾಳಿಬೀಡು, ಹಟ್ಟಿಹೊಳೆ, ಗರ್ವಾಲೆ, ಬಿಳಿಗೇರಿ, ಕಿರುಗಂದೂರು ಮುಂತಾದೆಡೆಗಳಲ್ಲಿ ಹೆಸರಿಗಷ್ಟೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಅಲ್ಲದೆ ಸಂಚಾರಿ ಆಸ್ಪತ್ರೆ ಲೆಕ್ಕದಲ್ಲಿ ಆ್ಯಂಬುಲೆನ್ಸ್ ಕೂಡ ಕೆಲವಷ್ಟು ಗ್ರಾಮಗಳಿಗೆ ವಾರಕ್ಕೊಮ್ಮೆ ವೈದ್ಯ - ಸಿಬ್ಬಂದಿ ಸಹಿತ ತೆರಳಿ ಜನರಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಬೇಕಿದೆ. ಈ ದಿಸೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಹಿಂದೆ ಉದ್ಭವ ಸಂಸ್ಥೆಗೆ ಗುತ್ತಿಗೆಯೊಂದಿಗೆ ಮೇಲಿನ ಆರೋಗ್ಯ ಕೇಂದ್ರಗಳ ನಿರ್ವಹಣೆ ವಹಿಸಿತ್ತು. ಈ ಯಾವ ಕೇಂದ್ರಗಳಲ್ಲಿಯೂ ವ್ಯೆದ್ಯ - ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿಲ್ಲ ವೆಂದು ಆ ಭಾಗದ ಜನತೆ ಬಹಿರಂಗ ಪಡಿಸಿದ ಕುರಿತು ‘ಶಕ್ತಿ’ ಸಚಿತ್ರ ವರದಿ ಪ್ರಕಟಿಸಿತ್ತು.
ಈ ವೇಳೆ ಎಚ್ಚೆತ್ತುಕೊಂಡಂತೆ ವರ್ತಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಂಬಂಧಿಸಿದ ಏಜೆನ್ಸಿ ರದ್ದುಗೊಳಿಸಿದ್ದಾಗಿ ಪ್ರಕಟಿಸಿದ್ದರು. ಆದರೂ ನಾಲ್ಕಾರು ತಿಂಗಳು ಗ್ರಾಮೀಣ ವೈದ್ಯರನ್ನು ನಿಯೋಜಿಸದೆ ಹಳ್ಳಿಗಾಡಿನಲ್ಲಿ ಸೇವೆಗೆ ವೈದ್ಯರು ಬರುತ್ತಿಲ್ಲವೆಂದು ಸಬೂಬು ನೀಡತೊಡಗಿದ್ದರು. ಈಗ ಗ್ರಾಮೀಣ ಜನತೆಯ ಪ್ರಕಾರ ಮತ್ತೆ ಜಿಲ್ಲಾ ಆರೋಗ್ಯ ಇಲಾಖೆಯ ಮಂದಿ, ಮೇಲಿನ ಗ್ರಾಮೀಣ ಆಸ್ಪತ್ರೆಗಳಿಗೆ ವೈದ್ಯರು ಮತ್ತು ಸಿಬ್ಬಂದಿಗಳನ್ನು ಮೈಸೂರಿನ ‘ಗ್ರೀನ್ ಡಾಟ್ ಸಂಸ್ಥೆ’ ಮೂಲಕ ನಿಯೋಜಿಸಿರುವದಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಆದರೆ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಜನತೆಯ ಪ್ರಕಾರ ಎಲ್ಲಿಯೂ ವೈದ್ಯರು ಮತ್ತು ನಿತ್ಯ ಆರೋಗ್ಯ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ; ವೈದ್ಯರೊಬ್ಬರು ಎಂದಾದರೊಮ್ಮೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹಾಜರಾತಿ ಪುಸ್ತಕದಲ್ಲಿ ವಾರಗಟ್ಟಲೆಯ ಸಹಿ ಮಾಡಿ ತೆರಳುತ್ತಿದ್ದಾರಂತೆ. ಆ ಹೊರತು ಯಾವದೇ ಚಿಕಿತ್ಸೆ ಅಥವಾ ರೋಗಿಗಳ (ಮೊದಲ ಪುಟದಿಂದ) ತಪಾಸಣೆ ಕೂಡ ನಡೆಸುತ್ತಿಲ್ಲವಂತೆ. ಸೂರ್ಲಬ್ಬಿ ಹಾಗೂ ಸುತ್ತಮುತ್ತಲಿನ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಸಹಿತ ಆರೆಂಟು ಸಿಬ್ಬಂದಿ ನಿತ್ಯ ಕರ್ತವ್ಯ ನಿರ್ವಹಿಸುತ್ತಿರುವ ಲೆಕ್ಕಾಚಾರ ದೊಂದಿಗೆ ಮಾಸಿಕ ವೇತನ ಕೂಡ ಬಿಡುಗಡೆಗೊಳಿಸಲಾಗುತ್ತಿದೆ ಎಂದು ಆರೋಪವಿದೆ. ಈ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದರೆ ಮಾತ್ರ ನಿತ್ಯ ಬಾಗಿಲು ಮುಚ್ಚಲ್ಪಟ್ಟಿರುತ್ತದೆ. ಇನ್ನು ಕನಿಷ್ಟ ಮಾತ್ರೆ ನೀಡಲು ದಾದಿಯರು ಕೂಡ ಇಲ್ಲದೇ, ಆರೋಗ್ಯ ಕೇಂದ್ರದ ಮೇಜಿನ ಮೇಲೆ ನಿತ್ಯ ಒಂದು ವೈದ್ಯರ ‘ಸ್ಟೆತೋಸ್ಕೋಪ್’ ಹಾಗೂ ಕತ್ತರಿಯ ದರ್ಶನವಾಗಲಿದೆ ಎಂದು ಸೂರ್ಲಬ್ಬಿ ಸುತ್ತಮುತ್ತಲಿನ ಜನತೆ ಬೊಟ್ಟು ಮಾಡಿದ್ದಾರೆ.
ಈ ಆರೋಗ್ಯ ಕೇಂದ್ರಗಳು ಮತ್ತು ಸಂಚಾರಿ ಆಸ್ಪತ್ರೆ ಅವ್ಯವಹಾರ ಕುರಿತು ಸೂಕ್ತ ತನಿಖೆ ನಡೆಸಿ, ಕರ್ತವ್ಯಕ್ಕೆ ಹಾಜರಾಗದೆ ವೈದ್ಯ - ಸಿಬ್ಬಂದಿ ಹೆಸರಿನಲ್ಲಿ ಹಣ ಪಡೆಯುತ್ತಿರುವ ಸಂಸ್ಥೆ ವಿರುದ್ಧ ಕ್ರಮ ಜರುಗಿಸಬೇಕೆಂದು ನೊಂದ ಗ್ರಾಮಸ್ಥರು ಆಗ್ರಹಪಡಿಸಿದ್ದಾರೆ. ತಪ್ಪಿದಲ್ಲಿ ಜಿಲ್ಲಾಧಿಕಾರಿ ಖುದ್ದು ಪರಿಶೀಲಿಸಿ ಇಂತಹ ಕೇಂದ್ರಗಳ ಹೆಸರಿನಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಖಾಯಂ ಬೀಗ ಹಾಕಿಸುವಂತೆ ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.