ಸೋಮವಾರಪೇಟೆ, ಡಿ. 21: ಎಲ್ಲರೂ ಶಿಸ್ತು ಬದ್ಧತೆಯಿಂದ ಜೀವನ ನಡೆಸಿದರೆ ಮಾತ್ರ ಸಮಾಜದಲ್ಲಿ ಸ್ವಾಸ್ಥ್ಯ ಮೂಡುತ್ತದೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿನ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ವ್ಯಾಮೋಹಗಳು ಮಕ್ಕಳ ಮನಸ್ಸನ್ನು ಕೆಡಿಸುತ್ತಿವೆ. ದುಶ್ಚಟಗಳು ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ. ವಿದ್ಯಾವಂತರೇ ಇಂದು ಮಾದಕ ವ್ಯಸನಿಗಳಾಗುತ್ತಿರುವದು ದುರಂತ. ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಇಂತಹ ಚಟಗಳಿಗೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮಾತನಾಡಿ, ಮಕ್ಕಳು ದಾರಿ ತಪ್ಪದಂತೆ ಶಿಕ್ಷಕರೊಂದಿಗೆ ಪೋಷಕರೂ ಎಚ್ಚರಿಕೆ ವಹಿಸಬೇಕು. ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಸಮಾಜದ ಆಸ್ತಿಯನ್ನಾಗಿಸಬೇಕು ಎಂದರು.
ಮುಖ್ಯೋಪಾಧ್ಯಾಯ ಹ್ಯಾರಿ ಮೋರಸ್ ಮಾತನಾಡಿ, ಮಕ್ಕಳು ಕುತೂಹಲ ಮತ್ತು ಇಚ್ಛಾಶಕ್ತಿಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಮೆದುಳಿನ ಮೇಲೆ ಒತ್ತಡ ಆಗದಂತೆ ಎಚ್ಚರಿಕೆ ವಹಿಸಬೇಕು. ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಜೇಸೀ ಸಂಸ್ಥೆಯ ಮಮತ ಅವರು, ಸ್ವಾಸ್ಥ್ಯ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಬೋಧಿಸಿದರು. ಯೋಜನೆಯ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಅವರು ಕಾರ್ಯಕ್ರಮದ ಉದ್ದೇಶದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್, ಒಕ್ಕೂಟದ ಅಧ್ಯಕ್ಷೆ ರುಕ್ಮಿಣಿ, ವಲಯ ಮೇಲ್ವಿಚಾರಕ ರಮೇಶ್, ಸೇವಾ ಪ್ರತಿನಿಧಿ ತಾರಾಲಕ್ಷ್ಮೀ, ಶಿಕ್ಷಕಿ ಸುಜಾತ ಉಪಸ್ಥಿತರಿದ್ದರು. ದುಶ್ಚಟಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ‘ನಶೆಯೆಂಬ ನರಕ’ ಎಂಬ ಜಾಗೃತಿ ಕಿರುಚಿತ್ರ ಪ್ರದರ್ಶಿಸಲಾಯಿತು.